ಅರಕಲಗೂಡು: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆಶ್ರಯ ಯೋಜನೆಯ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಣೆಯನ್ನು ಮುಂದೂಡಲಾಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಹೂವಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೂವಣ್ಣ ಅವರು, ಆಶ್ರಯ ಯೋಜನೆಯ ಅಧ್ಯಕ್ಷರು, ಮಾನ್ಯ ಶಾಸಕರಾದ ಎ.ಟಿ. ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ 2019-2020 ರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಪಟ್ಟಣ ಪಂಚಾಯತ್ನಿಂದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ತಯಾರಿಸಿದ್ದೇವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಜಿ ಪರಿಶೀಲನೆ ಮಾಡುವುದು ಬಾಕಿಯಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಸ್ವಲ್ಪ ವಿಳಂಬವಾಗಿದೆ ಎಂದರು.
ಇದುವರೆಗೂ 804 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಯಿಂದ ಅರ್ಜಿ ಪರಿಶೀಲನೆ ಬಾಕಿ ಇದೆ. ಮತ್ತು ಮೀಸಲಾತಿಗೆ ಅನುಗುಣವಾಗಿ ಪಟ್ಟಿ ತಯಾರಿಸುವ ಉದ್ದೇಶದಿಂದ ಸಮಿತಿಯ ಎಲ್ಲಾ ಸದಸ್ಯರುಗಳ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೂವಣ್ಣ ತಿಳಿಸಿದರು.