ಬೇಲೂರು(ಹಾಸನ): ಪರಿಸರವನ್ನು ಮನುಕುಲ ಅವಲಂಬಿಸಿದೆ. ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಮಾತ್ರ ಮನುಕುಲ ಅಭಿವೃದ್ಧಿಯಾಗಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಲೂರಿನ ಪ್ರಾಂಶುಪಾಲ ಪುಟ್ಟರಾಜು ಅಭಿಪ್ರಾಯಪಟ್ಟರು.
ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮನುಕುಲದ ಉಳಿವಿಗೆ ಮರವೇ ಆಧಾರ. ಅವುಗಳಿಲ್ಲದೇ ಯಾವ ಜೀವ ಸಂಕುಲವು ಉಳಿಯದು. ನಮ್ಮ ದೇಹಕ್ಕೆ ಉಸಿರನ್ನ ಒದಗಿಸುವ ಗಿಡಮರಗಳನ್ನ ಕಡಿಯುವ ಬದಲು ಕಾಪಾಡಬೇಕಿದೆ. ಅಲ್ಲದೇ ಪ್ರತಿಯೊಬ್ಬರು ತಮ್ಮ ಮನೆಯ ಮುಂಭಾಗ ಕನಿಷ್ಠ ಒಂದು ಗಿಡ ನೆಟ್ಟು ಪೋಷಣೆ ಮಾಡಿ. ಗಿಡ ನೆಡುವುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವುಗಳನ್ನು ಪೋಷಿಸುವ ಕೆಲಸವೂ ಆಗಬೇಕಿದೆ ಎಂದರು.
ಮರಗಳನ್ನು ಕಡಿದು ಕಟ್ಟಡಗಳನ್ನು ಕಟ್ಟುವ, ರಸ್ತೆಗಳನ್ನು ನಿರ್ಮಾಣದ ಮೂಲಕ ಸುಂದರ ಪ್ರಕೃತಿಯನ್ನು ನಿರ್ನಾಮ ಮಾಡುವ ಮನುಷ್ಯನ ಚಟ ಒಂದು ದಿನ ಮಾನವನನ್ನೇ ಚಟ್ಟಕ್ಕೆ ಏರಿಸುತ್ತದೆ. ಹಾಗಾಗಿ ಮನುಷ್ಯ ಪ್ರಕೃತಿಯನ್ನು ಪರಿಸರವನ್ನು ಉಳಿಸುವ ಕಾಪಾಡುವ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಬಿಆರ್ಸಿ ಮೋಹನ್ ರಾಜ್ ಅಭಿಪ್ರಾಯಪಟ್ಟರು
ಮನುಷ್ಯ ತನ್ನ ಜೀವನವನ್ನು ನಡೆಸುವುದಕ್ಕೆ ಮರಗಳನ್ನು ನಾಶ ಮಾಡುತ್ತಿದ್ದಾನೆ. ಅದರ ಪಾಪಗಳನ್ನು ಕಳೆಯುವುದಕ್ಕಾದರೂ ಮನುಷ್ಯ ಗಿಡಗಳನ್ನು ಬೆಳೆಸಬೇಕು. ಮನೆಯ ಕುಟುಂಬದವರೇ ಸೇರಿ ತಮ್ಮ ಹುಟ್ಟುಹಬ್ಬದ ದಿನ ಒಂದೊಂದು ಗಿಡಗಳನ್ನು ನೆಟ್ಟರೆ ಪ್ರಕೃತಿಯನ್ನು ಉಳಿಸಲು ಎಲ್ಲರಿಂದಲೂ ಸಾಧ್ಯ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಆಶಾ ಕಿರಣ್ ಹೇಳಿದರು.