ಹಾಸನ: ರೈತರ ಮನವಿಗಳನ್ನು ಸ್ವೀಕರಿಸಲು ನಿರಾಕರಿಸಿದ ಸಚಿವರ ನಡೆಗೆ ಸಿಟ್ಟಾದ ರೈತ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಸಭೆಯಿಂದ ಹೊರನಡೆದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆಯಿತು.
ಮಾಜಿ ಪ್ರಧಾನಿ ವಾಜಪೇಯಿ ಹೆಸರಲ್ಲಿ ರೈತರಿಗೆ ಜಾರಿಗೆ ತಂದಿರುವ ಅಟಲ್ ಭೂಜಲ ಯೋಜನೆಯ ಅನುಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಭಾಷಣಕ್ಕೂ ಮುನ್ನ ಮನವಿ ನೀಡಲು ರೈತ ಮುಖಂಡರು ಮುಂದಾದರು. ಈ ವೇಳೆ, ಭಾಷಣವಾದ ಬಳಿಕ ನಿಮ್ಮ ಮನವಿ ಸ್ವೀಕರಿಸುತ್ತೇನೆ, ವೇದಿಕೆ ಮೇಲೆ ಬರುವುದು ಬೇಡ ಎಂದು ಹೇಳಿದ ಸಚಿವರು ರೈತ ನಾಯಕರನ್ನು ವಾಪಸ್ಸು ಕಳಿಸಿದರು. ಭಾಷಣವಾದ ಬಳಿಕ ಮತ್ತೆ ಮನವಿಯನ್ನು ನೀಡಲು ಮುಂದಾದ ವೇಳೆ ಮತ್ತೆ ಸಿಟ್ಟಾದ ಸಚಿವರು ರೈತರ ಮನವಿಯನ್ನು ಸ್ವೀಕರಿಸಲೇ ಇಲ್ಲ.
ಸ್ಥಳೀಯ ಶಾಸಕ ಶಿವಲಿಂಗೇ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಲು ಮುಂದಾದಾಗ ಕುಪಿತಗೊಂಡಿದ್ದ ರೈತ ಮುಖಂಡರು ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಎಂದು ಘೋಷಣೆ ಕೂಗಿ ಸಭೆಯಿಂದ ಹೊರಹೋದರು.
ಬಳಿಕ ರೈತರ ಆಕ್ರೋಶ ಮತ್ತು ಅವರ ಸಮಸ್ಯೆಯನ್ನು ವೇದಿಕೆ ಮೇಲೆಯೇ ಸಚಿವರಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮನದಟ್ಟು ಮಾಡಿಕೊಟ್ಟರು. ಕೃಷಿಗಾಗಿ ಪಡೆದಿರುವ ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಡಬೇಕೆಂದು ಹಾಗೂ ಸರ್ಕಾರ ನಿಗದಿ ಮಾಡಿರುವ 21 ಸಾವಿರ ರೂಪಾಯಿ ಕಟ್ಟಲು ಸಾಧ್ಯವಿಲ್ಲ. ಬದಲಿಗೆ 10 ಸಾವಿರ ರೂ ಮಾತ್ರ ಕಟ್ಟಲು ಸಾಧ್ಯ. ಹಾಗಾಗಿ, 10 ಸಾವಿರ ರೂ ಕಟ್ಟಲು ಆದೇಶ ಮಾಡಬೇಕೆಂದು ಮನವಿ ಸಲ್ಲಿಸಲು ಅವರು ಬಂದಿದ್ದಾರೆ. ಹಾಗಾಗಿ ಮನವಿ ಸ್ವೀಕರಿಸಿ ಎಂದು ಸಚಿವರಿಗೆ ತಿಳಿಸಿದರು.
ಈ ಘಟನೆಯಿಂದ ವೇದಿಕೆಯಲ್ಲಿದ್ದ ಗಣ್ಯರಿಗೆ ಇರಿಸುಮುರುಸು ಉಂಟಾದಾಗ ಸ್ಥಳೀಯ ಶಾಸಕ ಶಿವಲಿಂಗೇ ಗೌಡ ರೈತರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಆದರೆ, ಸಚಿವರು ಸೌಜನ್ಯಕ್ಕಾದರೂ ರೈತರ ಮನವಿಯನ್ನು ಸ್ವೀಕರಿಸದೇ ಇರುವುದು ಬೇಸರದ ಸಂಗತಿ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿದೆ.