ಸಕಲೇಶಪುರ: ಪಟ್ಟಣಕ್ಕೆ ಸಮೀಪವಿರುವ ಹೆಬ್ಬಸಾಲೆ ಗ್ರಾಮದಲ್ಲಿ ಕೊರೊನಾ ಭೀತಿ ಹಿನ್ನೆಲೆ ಗ್ರಾಮದ ಪ್ರವೇಶ ದ್ವಾರದಲ್ಲಿ ಗ್ರಾಮಸ್ಥರೇ ಬೇಲಿ ಹಾಕಿದ್ದರು. ಆದರೆ ಇದನ್ನು ಅಧಿಕಾರಿಗಳು ತೆಗೆಯಲು ಮುಂದಾದ ಹಿನ್ನೆಲೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಪಟ್ಟಣದಿಂದ ಹೆಬ್ಬಸಾಲೆ ಗ್ರಾಮ ಸಂಪರ್ಕಿಸುವುದಕ್ಕೆ ರೈಲು ನಿಲ್ದಾಣದಿಂದ ರಸ್ತೆಯೊಂದಿದ್ದು, ಈ ರಸ್ತೆಯಲ್ಲಿ ಲಾಕ್ಡೌನ್ ನಡುವೆಯೂ ಅಪರಿಚಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಸಂಚರಿಸುತ್ತಿದ್ದ ಕಾರಣ ಗ್ರಾಮಸ್ಥರು ರಸ್ತೆಗೆ ಬೇಲಿ ಹಾಕಿದ್ದರು.
ಆದರೆ ಗ್ರಾಮದ ಕೆಲವರು ರಸ್ತೆಗೆ ಪ್ರವೇಶ ಇಲ್ಲದಿರುವುದಿರಂದ ತೊಂದರೆಯಾಗುತ್ತಿದೆ ಎಂದು ಗ್ರಾಪಂನವರಿಗೆ ದೂರು ನೀಡಿದ್ದರು.
ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಹಾಗೂ ಪಿಡಿಒ ವತ್ಸಲಾ ಕುಮಾರಿ ಬೇಲಿಯನ್ನು ತೆಗೆಸಲು ಮುಂದಾದರು. ಈ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ಬಳಿಕ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ರಾಘವೇಂದ್ರ, ಗ್ರಾಮಸ್ಥರನ್ನು ಸಮಾಧಾನಿಸಿದರು. ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಗ್ರಾಮದೊಳಗೆ ನಿತ್ಯ ಸಂಚಾರಿ ಪೊಲೀಸರು ಬಂದು ಹೋಗುವಂತೆ ಆದೇಶಿಸಿದ ಮೇಲೆ ಗ್ರಾಮಸ್ಥರು ಸಮಾಧಾನಗೊಂಡು ಬೇಲಿ ತೆಗೆಯಲು ಒಪ್ಪಿದರು.