ಹಾಸನ: ಕೊರೊನಾ ಸಂದರ್ಭದಲ್ಲಿ ಸೀಲ್‌ಡೌನ್ ಮಾಡಿದ್ದ ಮನೆಗೆ ಕನ್ನ ಹಾಕಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಕೊಣನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಚ್.ಆರ್. ವೆಂಕಟೇಶ್ (31) ಬಂಧಿತ ಆರೋಪಿ. ಅರಕಲಗೂಡು ತಾಲೂಕಿನ ಹಾನಗಲ್ ಗ್ರಾಮದ ಈತ, ಅದೇ ಗ್ರಾಮದ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮನೆ ಮಾಲೀಕರಾದ ಸಹೋದರರು ಮೃತಪಟ್ಟಿದ್ದರು.
ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಆ ಮನೆಯನ್ನು ಸೀಲ್‌ಡೌನ್ ಮಾಡಿದ್ದರು. ಈ ಸಂದರ್ಭದಲ್ಲಿ ವೆಂಕಟೇಶ್ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್ಪಿ, ಹಾನಗಲ್ ಗ್ರಾಮದ ಸಹೋದರರು ಕೊರೊನಾದಿಂದ ಮೃತಪಟ್ಟ ಕಾರಣ ಇವರ ಮನೆಯನ್ನು 14 ದಿನ ಸೀಲ್‌ಡೌನ್ ಮಾಡಲಾಗಿತ್ತು.
ಇದನ್ನು ಗಮನಿಸಿದ್ದ ವೆಂಕಟೇಶ್ ಸುಮಾರು 533 ಗ್ರಾಂ ಚಿನ್ನ, 99 ಸಾವಿರ ರೂಪಾಯಿ ಮೌಲ್ಯದ 2.780 ಕೆ.ಜಿ ಬೆಳ್ಳಿ ಹಾಗೂ 60 ಸಾವಿರ ನಗದು ಕಳವು ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಕೊಣನೂರುಪೊಲೀಸರು ಎಸ್ಪಿ ಶ್ರೀನಿವಾಸಗೌಡ, ಎಎಸ್ಪಿ ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಅರಕಲಗೂಡು ಸಿಪಿಐ ದೀಪಕ್, ಕೊಣನೂರು ಪಿಎಸ್ಐ ಸಾಗರ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಮೃತ ಸೋಂಕಿತರ ಮನೆಯಲ್ಲಿ ವೆಂಕಟೇಶ್ ಕೆಲಸ ಮಾಡುತ್ತಿದ್ದ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿ, ಕಳ್ಳತನ ಮಾಡಿದ್ದ ಚಿನ್ನಾಭರಣ, ಬೆಳ್ಳಿ, ನಗದಅನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿದ ವಿಶೇಷ ತಂಡದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡದಲ್ಲಿದ್ದ ಸಿಬ್ಬಂದಿಗೆ ಅಭಿನಂದನೆ ತಿಳಿಸಿ ವಿಶೇಷ ಬಹುಮಾನ ವಿತರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಅರಕಲಗೂಡು ಸಿಪಿಐ ದೀಪಕ್, ಕೊಣನೂರು ಪಿಎಸ್ಐ ಸಾಗರ್ ಮತ್ತು ಸಿಬ್ಬಂದಿ ಹಾಜರಿದ್ದರು.