ಹಾಸನ: ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭಾಷಣಗಳಲ್ಲಿ ಸೈನಿಕರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಇದನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.
ಮೈತ್ರಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾ ಹಾಗೂ ಬಾಲಕೋಟ್ ದಾಳಿಯನ್ನು ಮೋದಿ ಅವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಆಯೋಗವೂ ಸೈನಿಕರು, ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದೆ. ಬಿಜೆಪಿಗೆ ಭಯ ಹುಟ್ಟಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳಿಂದ ದಾಳಿ ನಡೆಸಲಾಗುತ್ತಿದೆ. ತಮ್ಮ ಸ್ವಾರ್ಥಕ್ಕೆ ಇಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಮೈತ್ರಿ ಸರ್ಕಾರದಲ್ಲಿ ಪರ್ಸೆಂಟೇಜ್ ವ್ಯವಹಾರವಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಅವರನ್ನು ಪ್ರಶ್ನಿಸುತ್ತೇನೆ. ನಿಮಗೆ ಎಲ್ಲಾ ಮಾಹಿತಿಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಮೈತ್ರಿ ಸರ್ಕಾರ ಯಾವ ಯೋಜನೆಯಲ್ಲಿ, ಯಾವ ಕ್ಷೇತ್ರದಲ್ಲಿ ಪರ್ಸೆಂಟೇಜ್ ತೆಗೆದುಕೊಂಡಿದೆ ಸಾಬೀತು ಮಾಡಬೇಕು. ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನ ಚುನಾಯಿಸಿದ ಸರ್ಕಾರ ರಾಜ್ಯದಲ್ಲಿ ಇದೆ. ದೇಶದ ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆ ಇದೆ. ಸಂವಿಧಾನದ ಗಣತಂತ್ರ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಣ್ಣ, ತಮ್ಮಂದಿರು, ಕುಟುಂಬದ ರೀತಿ ಇರಬೇಕು. ಹೀಗಿರುವಾಗ ನೀವು ಒಂದು ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.