ಹಾಸನ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಮೇಲೆ ಹಲವು ಮುಖಂಡರ ದೃಷ್ಟಿ ನೆಟ್ಟಿದ್ದು, ಗದ್ದುಗೆ ಯಾರಿಗೆ ಒಲಿಯಲಿದೆ ಎಂದು ಬಿಜೆಪಿ ಮೊಗಸಾಲೆಯಲ್ಲಿ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ.
ಹಾಸನದ ಹುಡಾ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ನಗರಸಭೆ ಮಾಜಿ ಸದಸ್ಯ ಹೆಚ್.ಎಂ.ಸುರೇಶ್ ಕುಮಾರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಆಕಾಂಕ್ಷಿಗಳಾಗಿದ್ದಾರೆ. ಇದಲ್ಲದೆ ಹಾಸನ ಗ್ರಾಮಾಂತರ ಘಟಕದ ಅಧ್ಯಕ್ಷ ಮೊಗಣ್ಣಗೌಡ, ಮುಖಂಡರಾದ ಪ್ರಸನ್ನ ಕುರ್ಮಾ, ಲೋಹಿತ್ ಗೌಡ ಕುಂದೂರು ಸೇರಿದಂತೆ ಹಲವರು ಪೈಪೋಟಿಯಲ್ಲಿದ್ದು, ರಾಜಕೀಯ ಪ್ರಭಾವ ಬಳಸಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರಡು ವರ್ಷ ಹುಡಾ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಕೊನೆಯಲ್ಲಿ ಕೃಷ್ಣಕುಮಾರ್ ಅವರಿಗೆ ಗಾದಿ ಒಲಿದ್ದಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಒಂದು ವರ್ಷ ಖಾಲಿ ಇತ್ತು. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಜೆಡಿಎಸ್ ಹಿರಿಯ ಮುಖಂಡ ಕೆ.ಎಂ.ರಾಜೇಗೌಡರಿಗೆ ಮಣೆ ಹಾಕಲಾಗಿತ್ತು. ಹೀಗಾಗಿ ಯಾರ ಲೆಕ್ಕಾಚಾರ ಏನೇ ಇದ್ದರೂ ಅಂತಿಮ ನಿರ್ಧಾರ ಮೇಲ್ಮಟ್ಟದಿಂದಲೇ ಆಗಬೇಕಿರುವುದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಕೆಲವೇ ದಿನಗಳಲ್ಲಿ ಬಯಲಾಗಲಿದೆ.