ಹಾಸನ: ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಾಗನಹಳ್ಳಿ ಕ್ರಾಸ್ ಬಳಿ ಕಳೆದ ತಿಂಗಳು ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆ ಕೆ.ಆರ್.ನಗರದ ನಿವಾಸಿ ಹೆಚ್.ಜಿ.ಮೋಹನ್ ಕೊಲೆ ಆರೋಪಿ ಎಂದು ತಿಳಿಸಿದರು. ಸೆಪ್ಟಂಬರ್ 2ರಂದು ದೊಡ್ಡಬಾಗನಹಳ್ಳಿ ಕ್ರಾಸ್ ಸಮೀಪದ ಜವೇನಹಳ್ಳಿ ಕೊಪ್ಪಲು ಸ್ವಾಮೀಗೌಡ ಎಂಬುವರ ಪುತ್ರ ದಿನೇಶ್‌ಗೂ ಆರೋಪಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಈ ವೇಳೆ ಆರೋಪಿಯು ದಿನೇಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ನಂತರ ಶಕುನಿಗೌಡ ಎಂಬುವರ ಜಮೀನಿನ ರಸ್ತೆಬದಿ ಕಾಲುವೆಯಲ್ಲಿ ದಿನೇಶನ ಶವ ಪತ್ತೆಯಾಗಿದ್ದು, ಈ ಕುರಿತು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಉಪವಿಭಾಗದ ಪೊಲೀಸ್ ಅಧೀಕ್ಷಕ ಪುಟ್ಟಸಾಮಿಗೌಡ, ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಮಂಗಳವಾರ ಮೊಸಳೆ ಹೊಸಹಳ್ಳಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮೋಹನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.
ಇದೇ ವೇಳೆ ಯಶಸ್ವಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.