ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಕಳಪೆಯಾಗಿದ್ದು, ಮೊಳಕೆಯೊಡೆಯುವ ಮುನ್ನವೇ ಕಮರುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ರೈತರಿಗೆ ಎಕರೆಗೆ 30 ಸಾವಿರ ರೂ.ಪರಿಹಾರ ನೀಡಬೇಕೆಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ಅವರು, ಆಲೂಗೆಡ್ಡೆ ಬೀಜವನ್ನ ಖರೀದಿಸುವ ಸಂದರ್ಭದಲ್ಲಿಯೇ ನಾನು ಮತ್ತು ನಮ್ಮ ಜೆಡಿಎಸ್ ಶಾಸಕರು, ಕೇವಲ ಮಣ್ಣು ಪರೀಕ್ಷೆ ಮಾಡಿದ್ರೆ ಸಾಲದು. ಬೀಜವನ್ನ ಕೂಡಾ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದ್ದೆವು. ಅಲ್ಲದೇ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿಯವರ ಗಮನಕ್ಕೂ ಈ ವಿಷಯವನ್ನು ತಂದಿದ್ದೆ ಎಂದರು.
ಈಗ ರೈತರು ಬಿತ್ತನೆ ಮಾಡಿ 15 ದಿನ ಕಳೆದ್ರು ಮೊಳೆಕೆಯೊಡೆಯುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಜೊತೆಗೆ ಎಲ್ಲೋ ಒಂದು ಕಡೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿದ್ದರಿಂದ ಮಣ್ಣಿನಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ರೈತರು ಬಿತ್ತನೆ ಮಾಡಿ ಸಾಲಗಾರರಾಗಿದ್ದಾರೆ. ತಕ್ಷಣ ಸರ್ಕಾರ ಜಿಲ್ಲೆಯ ರೈತರಿಗೆ ಪ್ರತಿ ಎಕರೆಗೆ 30 ಸಾವಿರದಂತೆ ಪರಿಹಾರ ನೀಡಬೇಕು. ಜೊತೆಗೆ ಪರಿಹಾರ ನೀಡದೇ ಸರ್ಕಾರ ನಿರ್ಲಕ್ಷ್ಯ ತೋರಿದ್ರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.
ನಂತರ ಮಾತನಾಡಿದ ರೈತ ಮುಖಂಡ ಕಣಗಾಲ್ ಮೂರ್ತಿ, ನಾವು ಬಿತ್ತನೆ ಮಾಡಬೇಕಾದ್ರೆ ಪ್ರತಿ ಎಕರೆಗೆ ಕನಿಷ್ಠ 35 ಸಾವಿರ ಖರ್ಚಾಗುತ್ತದೆ. ಹೀಗಾಗಿ ಕಳಪೆ ಬೀಜವನ್ನ ನೀಡಿರುವ ವರ್ತಕರಿಂದ ನಮಗೆ ವಾಪಸ್ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ಹಿಂದೆ ನಾವು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದ್ರೂ ಯಾವುದೇ ರೀತಿಯ ಪರೀಕ್ಷೆ ಮಾಡದೇ ರೈತರಿಗೆ ಬೀಜಗಳನ್ನು ವಿತರಣೆ ಮಾಡಿದ್ದಾರೆ. ಹೀಗಾಗಿ ರೈತರಿಗಾದ ನಷ್ಟವನ್ನ ಜಿಲ್ಲಾಡಳಿತ ಸಂಬಂಧಪಟ್ಟವರಿಂದ ವಾಪಸ್ ಕೊಡಿಸಬೇಕು. ಮತ್ತು ವರ್ತಕರನ್ನೊಳಗೊಂಡ ರೈತರ ಸಭೆ ಕರೆದು ತೀರ್ಮಾನ ಮಾಡಿ, ರೈತರ ಹಿತ ಕಾಯಬೇಕು. ತಪ್ಪಿದಲ್ಲಿ ಈ ತಿಂಗಳ 25ರೊಳಗೆ ನಮ್ಮ ಮುಂದಿನ ನಡೆ ಉಗ್ರಸ್ವರೂಪ ತಾಳುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಕಳೆದ ಬಾರಿ ಅತಿವೃಷ್ಠಿಯಾಗಿ ಬೆಳೆ ನಾಶವಾದ್ರೆ, ಈ ಬಾರಿ ಕೊರೊನಾ ಎಂಬ ಹೆಮ್ಮಾರಿ ವಕ್ಕರಿಸಿ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಹೀಗಾಗಿ ದಶಕಗಳ ಹಿಂದೆ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಬೆಳೆಯನ್ನ ಈಗ ಕೇವಲ 70-80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವಂತಾಗಿದೆ. ಮುಂದೆ ಸರ್ಕಾರ ರೈತರ ಹಿತ ಕಾಯದಿದ್ದರೆ ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆ ಶರಣಾಗುತ್ತಾರೆ. ಹಾಗಾಗಿ ಕಳಪೆ ಬೀಜ ಪೂರೈಕೆ ಮಾಡುವವರ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಿ ನಷ್ಟವನ್ನ ಭರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.