ಸಕಲೇಶಪುರ (ಹಾಸನ): ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮದಲ್ಲಿ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಹೆಬ್ಬಸಾಲೆಯಿಂದ ದೇವಿಹಳ್ಳಿ ಮಾರ್ಗವಾಗಿ ದೋಣಿಗಲ್ ವರೆಗೆ ಸುಮಾರು 3.5 ಕಿ.ಮೀ ಉದ್ದದ ರಸ್ತೆಯನ್ನು 3 ಕೋಟಿಗೂ ಹೆಚ್ಚು ಅನುದಾನದಲ್ಲಿ ಮಾಡಲಾಗುತ್ತಿದೆ. ಜೊತೆಗೆ ಮಲೆನಾಡಿನ ವಿವಿಧ ರಸ್ತೆಗಳ ನಿರ್ಮಾಣಕ್ಕೆ 30 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತದೆ. ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ನಂತರ ಹಾಸನ ಜಿಲ್ಲೆಗೆ ಸುಮಾರು 250 ಕೋಟಿ ಅನುದಾನ ತಂದಿದ್ದೇನೆ. ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿಯವರ ಅಭಿವೃದ್ದಿ ಕಾರ್ಯಗಳ ಶ್ಲಾಘನೀಯವಾದದ್ದು. ಅಭಿವೃದ್ದಿಯನ್ನು ಒಂದೆಡೆಗೆ ಸೀಮಿತಗೊಳಿಸದೆ, ಕ್ಷೇತ್ರದ ಎಲ್ಲೆಡೆಗೆ ಅನುದಾನ ನೀಡುತ್ತಾರೆ ಎಂದರು.
ಜಿಲ್ಲೆಯಲ್ಲಿ ತಂಬಾಕು ಹಾಗೂ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗಾರರು ಅತಿವೃಷ್ಠಿ, ಬೆಲೆ ಕುಸಿತ, ಕಾಡಾನೆ ಸಮಸ್ಯೆ ಸೇರಿದಂತೆ ಇನ್ನು ಹಲವಾರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. ಆದರೂ ಸಹ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರುತ್ತಿಲ್ಲ. ಕಾಫಿ ಬೆಳೆಗಾರರಿಗೆ ಕನಿಷ್ಠ 3,000 ಕೋಟಿ ಬಡ್ಡಿ ರಹಿತ ಸಾಲ ನೀಡಿ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇನೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಕಾಫಿ ಬೆಳೆಗಾರರ ರಕ್ಷಣೆ ನನ್ನ ಗುರಿಯಾಗಿದ್ದು, ಅವರ ಪರ ನಿರಂತರವಾಗಿ ಸಂಸತ್ತಿನಲ್ಲಿ ಹೋರಾಟ ಮಾಡುತ್ತೇನೆ ಎಂದರು.
ಶಾಸಕ ಹೆಚ್.ಕೆ ಕುಮಾರಸ್ವಾಮಿ ಮಾತನಾಡಿ, ಸಂಸದ ಪ್ರಜ್ವಲ್ ರೇವಣ್ಣನವರ ಕೃಪಾಕಟಾಕ್ಷದಿಂದ ತಾಲೂಕಿಗೆ ಸುಮಾರು 40 ಕೋಟಿ ಹಣ ರಸ್ತೆಗಳ ಅಭಿವೃದ್ದಿಗೆ ಬಂದಿದೆ. ಈ ಬಾರಿ ಸಂಸದರು ವಾಣಿಜ್ಯ ಸಲಹೆಗಳ ವಿಭಾಗದಲ್ಲಿ ಸದಸ್ಯರಾಗಿ ಆಯ್ಕೆಯಾಗಿರುವುದು ಶ್ಲಾಘನೀಯ. ಇದರಿಂದ ಅವರಿಗೆ ಬೆಳೆಗಾರರ ಪರ ಧ್ವನಿಯೆತ್ತುವುದಕ್ಕೆ ಅನುಕೂಲವಾಗುತ್ತದೆ ಎಂದರು