ಹಾಸನ: ಪತಿ ಸಾವನ್ನಪ್ಪಿದ ಬಳಿಕ ಮರು ವಿವಾಹವಾಗಿದ್ದ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ ಬಳಿ ನಡೆದಿದೆ.
27 ವರ್ಷದ ಪ್ರಜ್ವಲಾ ತನ್ನ ಎರಡು ವರ್ಷದ ಹೆಣ್ಣು ಮಗು ಸಾಧ್ವಿಗೆ ಮೊದಲು ನೇಣು ಹಾಕಿದ್ದಾಳೆ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎರಡನೇ ಪತಿ ಮೋಹನ್ ಮನೆಯಿಂದ ಹೊರ ಹೋದಾಗ ಪ್ರಜ್ವಲಾ ಈ ಕೃತ್ಯ ಎಸಗಿದ್ದಾಳೆಂದು ತಿಳಿದುಬಂದಿದೆ.
ಪ್ರಜ್ವಲಾಗೆ ಎರಡನೇ ಮದುವೆ ಇಷ್ಟವಿರಲಿಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ಪ್ರಜ್ವಲಾ ಪೋಷಕರು ಮರು ವಿವಾಹಕ್ಕೆ ಒಪ್ಪಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಇತ್ತ ಪ್ರಜ್ವಲಾ ಕೈಹಿಡಿದ ಮೋಹನ್ಗೆ ಕೂಡ ಇದು ಎರಡನೇ ಮದುವೆಯಾಗಿತ್ತು. ಮೊದಲ ಪತ್ನಿ ಕೂಡ ಬೈಕ್ ಅಪಘಾತದಲ್ಲಿ ಎರಡು ವರುಷದ ಹಿಂದೆ ಮೃತಪಟ್ಟಿದ್ದಳು.
ಸದ್ಯ ಮೋಹನ್ ಜೊತೆ ಗಲಾಟೆ ಮಾಡಿಕೊಂಡು ಪ್ರಜ್ವಲಾ ಸಾವಿನ ಹಾದಿ ಹಿಡಿದಿದ್ದಾಳಾ? ಅಥವಾ ಸಾವಿಗೆ ಮತ್ತೇನಾದ್ರೂ ಕಾರಣವಿದೆಯಾ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಘಟನೆ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.