ಹಾಸನ: ಇಷ್ಟು ದೊಡ್ಡ ಕಾಲೇಜು ಮಾಡುವಾಗ ಮೊದಲು ರಸ್ತೆ ಮಾಡಬೇಕು. ನಂತರ ಕಾಲೇಜು ಮಾಡಬೇಕು. ಆದರೆ ಇವರು ಹೆಲಿಕಾಪ್ಟರ್ನಲ್ಲಿ ಬರುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಹಾಗಾಗಿ ಇಂತಹದೊಂದು ಸಮಸ್ಯೆಯಾಗಿದೆ ಎಂದು ಶಾಸಕ ಪ್ರಿತಂ ಜೆ. ಗೌಡ ಮತ್ತೊಮ್ಮೆ ರೇವಣ್ಣ ಅವರ ಕಾಮಗಾರಿ ಬಗ್ಗೆ ಕುಟುಕಿದ್ರು.
ಹಾಸನದ ಪಶುಸಂಗೋಪನಾ ಮತ್ತು ಸಂಶೋಧನಾ ಸಂಸ್ಥೆಗೆ ಇಂದು ಸಚಿವ ಪ್ರಭು ಚೌಹ್ಹಾಣ್ ಜೊತೆಯಲ್ಲಿ ಭೇಟಿ ನೀಡಿದ ವೇಳೆ ಕಾಲೇಜು ಆಡಳಿತ ಮಂಡಳಿಯವರು ರಿಂಗ್ ರಸ್ತೆಯಿಂದ ಕಾಲೇಜಿಗೆ ಬರಲು ಸರಿಯಾದ ರಸ್ತೆಯಿಲ್ಲ. ದಯಮಾಡಿ ಕಾಲೇಜಿಗೊಂದು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಿ. ಹಿಂದೆ 5-10 ಕೋಟಿ ಖರ್ಚಾಗುತ್ತಿತ್ತು. ಆದ್ರೆ, ಈಗ 20-30 ಕೋಟಿ ರೂ. ಖರ್ಚಾಗುತ್ತೆ ಎಂದು ಸಚಿವರಿಗೆ ಮನವಿ ಮಾಡಿದರು. ಸ್ಥಳೀಯ ಶಾಸಕರ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಹೇಳಿದರು.
ಮಾತಿನ ಮಧ್ಯೆ ಮಾತನಾಡಿದ ಶಾಸಕ ಪ್ರಿತಂ ಜೆ. ಗೌಡ, ನೋಡ್ರಿ ಹಿಂದೆ ಕಾಮಗಾರಿ ಮಾಡಿದವರಿಗೆ ಗೊತ್ತಿರಬೇಕು. ಇಷ್ಟು ದೊಡ್ಡ ಕಾಲೇಜ್ ನಿರ್ಮಾಣ ಮಾಡುತ್ತಿರುವಾಗ ಮೊದಲು ರಸ್ತೆ ಮಾಡಬೇಕು. ನಂತರ ಕಾಲೇಜು ಮಾಡಬೇಕು ಎಂದು. ಆದ್ರೆ ಅವರು ನಾವು ಹೆಲಿಕಾಪ್ಟರ್ನಲ್ಲಿ ಬರುವುದಲ್ಲವೇ ಎಂಬ ಯೋಚನೆಯಿಂದ ಪ್ಲ್ಯಾನ್ ಮಾಡಿದ್ದಾರೆ. ಹಾಗಾಗಿ ಕಾಲೇಜಿಗೆ ರಸ್ತೆ ಸಮಸ್ಯೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಕುಟುಕಿದ್ರು.
2006-07ರಲ್ಲಿದ್ದ 20-20 ಸರ್ಕಾರದಲ್ಲಿ ಹಾಸನಕ್ಕೆ ಬೃಹತ್ ಕಟ್ಟಡವನ್ನು ಹೊಂದಿರುವ ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯನ್ನ ನೀಡಿದ್ದು, ಬಳಿಕ ಅಲ್ಲಿಂದ ಇಲ್ಲಿಯ ತನಕ ರಸ್ತೆಯ ವಿಚಾರವಾಗಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕಾಲೇಜಿನ ರಸ್ತೆ ಸಂಪರ್ಕ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಅಂದಿನ 20-20 ಸರ್ಕಾರದಲ್ಲಿ ಕೆಲವು ಕಾಮಗಾರಿ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಕುಮಾರಸ್ವಾಮಿ ಹೆಲಿಕಾಪ್ಟರ್ನಲ್ಲಿ ಬಂದು ಹೋಗಿದ್ದರು.
ಬಳಿಕ 2018ರಲ್ಲಿ ರಚನೆಯಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ಕೆಂದ್ರದ ಮಂತ್ರಿ ನಿತಿನ್ ಗಡ್ಕರಿಯೊಂದಿಗೆ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ ಹೊಸ ಬಸ್ ನಿಲ್ದಾಣಕ್ಕೆ ಬರಲು ಬಸ್ ನಿಲ್ದಾಣದ ಪಕ್ಕದಲ್ಲಿಯೇ ಹೆಲಿಪ್ಯಾಡ್ ನಿರ್ಮಾಣ ಮಾಡಿಸಿ ಹೆಲಿಕಾಪ್ಟರ್ನಲ್ಲಿ ಬಂದು ಕಾಮಗಾರಿಗೆ ಚಾಲನೆ ನೀಡಿದ್ರು ಎಂದರು.