ಹಾಸನ: ಶಾಸಕ ಪ್ರೀತಂ ಜೆ. ಗೌಡ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರೊಂದಿಗೆ ಕೊಂಚ ಖಡಕ್ ಆಗಿಯೇ ಮಾತನಾಡಿದರು.
ಹೊಸ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣದ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಕಾಮಗಾರಿಯ ಅಧಿಕಾರಿಗಳ ಜೊತೆಗೆ ತೆರಳಿ ಪರಿಶೀಲನೆ ನಡೆಸಿದರು. ಸುಮಾರು 48 ಕೋಟಿ ರೂ. ವೆಚ್ಚದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮ ಅನುದಾನದಲ್ಲಿ ಪ್ರಾರಂಭವಾಗಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಕಾಮಗಾರಿ ಮುಗಿಯುವ ಹಂತ ತಲುಪಿಲ್ಲ. ಸಮರ್ಪಕ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ರಸ್ತೆಯ ಪಕ್ಕದ ಅಂಗಡಿ ಮತ್ತು ಮನೆಯ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದು, ಅಂತಿಮ ತೀರ್ಪು ಬರುವ ತನಕ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದ ಪಟ್ಟು ಹಿಡಿದ್ದಿದ್ದರಿಂದ ಕೆಲಸ ಅರ್ಧಕ್ಕೆ ನಿಂತಿತ್ತು. ಆದ್ರೆ ನ್ಯಾಯಾಲಯದಲ್ಲಿ ನಿವಾಸಿಗಳ ಅರ್ಜಿಗಳು ವಜಾ ಆಗಿದ್ದು, ನಿನ್ನೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಳೆನರಸೀಪುರ ರಸ್ತೆಯಲ್ಲಿ ತೆರವುಗೊಳಿಸಿದ್ದ ಅಂಗಡಿಗಳ ಮತ್ತು ಮನೆಗಳ 23 ಮಾಲೀಕರುಗಳು ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ರು. ಆದ್ರೆ ರಸ್ತೆ ಸುಮಾರು 20 ಅಡಿಗಳಷ್ಟು ಜಾಗ ನಗರಸಭೆಗೆ ಸೇರುತ್ತದೆ ಎಂಬ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯಲ್ಲಿ ಅರ್ಜಿ ವಜಾಗೊಂಡಿದೆ. ಅನುಕಂಪದ ಆಧಾರದ ಮೇಲೆ ಪರಿಹಾರ ನೀಡುವ ನಿಟ್ಟಿನಲ್ಲಿ ಭೂಮಿ ಮಾಲೀಕರರೊಂದಿಗೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇಂದು ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಅರಕಲಗೂಡು: ಆಶ್ರಯ ನಿವೇಶನ ತಾತ್ಕಾಲಿಕ ಪಟ್ಟಿ ಪ್ರಕಟ
ನಿನ್ನೆ ಕಾಮಗಾರಿ ಪರಿಶೀಲನೆ ವೇಳೆ ಭೂ ಮಾಲೀಕರ ಮತ್ತು ಶಾಸಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಕೆಲವರು ಜಾಗ ಬಿಡುವುದಿಲ್ಲ ಎಂದು ಹಿಡಿದ ಪಟ್ಟು ಸಡಿಲಿಸದೇ ಇದ್ದಾಗ, ನಿಮ್ಮ ಈ ಧೋರಣೆಯಿಂದ ಲಕ್ಷಾಂತರ ಮಂದಿ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ. ಇದೇ ರೀತಿ ಹಠ ಹಿಡಿದರೆ, ನಾನೇ ನಿಂತು ರಸ್ತೆಗೆ ಬೇಕಾಗಿರುವ ಜಾಗವನ್ನು ತೆರೆವುಗೊಳಿಸಲಾಗುವುದು. ಬೇಕಾದರೆ ನನ್ನ ವಿರುದ್ಧ ದೂರು ನೀಡಿ ಎಂದು ಬಹಳ ಖಡಕ್ ಆಗಿ ಭೂ ಮಾಲೀಕರಿಗೆ ಉತ್ತರಿಸಿದ್ರು.
ರಸ್ತೆಯ ಜಾಗ ಒತ್ತುವರಿಯಾಗಿದ್ದರಿಂದ ನಿಮ್ಮ ನಿಯಮದ ಪ್ರಕಾರ ಪರಿಹಾರ ಕೊಡಲು ಸಾಧ್ಯವಿಲ್ಲ. ಆದ್ರೆ ನ್ಯಾಯಯುತವಾಗಿ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿಯೇ ಆಗಬೇಕು ಎಂದು ಹಠ ಹಿಡಿದು ಕಾಲ ತಳ್ಳಬೇಡಿ. ಕೊರೊನಾ ಪರಿಣಾಮ ಈಗಾಗಲೇ ಕಾಮಗಾರಿ ವಿಳಂಬವಾಗಿದೆ. ನೀವು ಕಾಮಗಾರಿಗಳಿಗೆ ಅಡ್ಡಿಪಡಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಅರ್ಥ ಮಾಡಿಕೊಂಡು ಸಮಸ್ಯೆಯನ್ನು ನಾಳೆ ಸಭೆಯಲ್ಲಿ ಕೂತು ತೀರ್ಮಾನಿಸಿಕೊಳ್ಳೋಣ ಎಂದು ಮನವಿ ಮಾಡಿದ್ರು.