ಹಾಸನ: ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂತು. ಆಗ ಕುಮಾರಸ್ವಾಮಿ ಹುಟ್ಟಿರಲಿಲ್ಲ. ಆದರೂ ಸ್ವಾತಂತ್ರ್ಯ ದಿನಾಚರಣೆ ದಿನದಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ. ಅವರು ಪುಸ್ತಕ ನೋಡಿ ಕಲಿತಿರುತ್ತಾರೆ. ಹಾಗೆಯೇ ನಾನು ಪುಸ್ತಕ ನೋಡಿ ತಿಳಿದುಕೊಂಡಿದ್ದೇನೆ ಎಂದು ಶಾಸಕ ಪ್ರೀತಮ್ ಗೌಡ ಹೆಚ್ಡಿಕೆಗೆ ಟಾಂಗ್ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಗೋವಿಂದ ಕಾರಜೋಳ, ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಂಘ ಪರಿವಾರದ ನಾಯಕರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೇನೆ. ಸಿಎಂ ಭೇಟಿ ವೇಳೆ ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಹಾಸನ ಬಿಜೆಪಿ ಕಾರ್ಯಕರ್ತರ ಅಸಮಾಧಾನದ ಬಗ್ಗೆಯೂ ಮಾತನಾಡುತ್ತೇನೆ ಎಂದರು.
ಶಾಸಕರ ಮಗ ಮತ್ತು ನಾನು ಒಂದೇ ಕಾಲೇಜಿನಲ್ಲಿ ಓದಿದ್ದು, ಕುಮಾರಸ್ವಾಮಿ ಯಾಕೆ ನಮ್ಮ ಪಕ್ಷದ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ನಮ್ಮ ಪಕ್ಷದ ಗೊಂದಲವನ್ನು ಹಿರಿಯರ ಮಾರ್ಗದರ್ಶನದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ನಾನು ಟಾಸ್ಕ್ ಮಾಸ್ಟರ್ ಇದ್ದಂತೆ ಮಾತನಾಡುವುದೇ ಕೆಲಸ ಆಗಬಾರದು. ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ಮಾತು ಸಾಧನೆ ಆಗಬಾರದು. ಸಾಧನೆ ಮಾತನಾಡಬೇಕು ಎಂದರು.
ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುತ್ತೇನೆ. ಸಿಎಂ ಸೇರಿದಂತೆ ಎಲ್ಲ ಸಚಿವರ ಸಹಕಾರ ಪಡೆಯುತ್ತೇನೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಹಳೆ ಮೈಸೂರು ಭಾಗದಲ್ಲಿ ಸಚಿವ ಸ್ಥಾನ ನೀಡುವ ಕುರಿತು ಮಾತನಾಡುವೆ. ನಾನು ಸಾಮಾನ್ಯ ಶಾಸಕ, ಬಿ.ವೈ.ವಿಜಯೇಂದ್ರ ಅವರನ್ನು ಮಂತ್ರಿ ಮಾಡಿ ಎಂದು ಹೇಳುವಷ್ಟು ದೊಡ್ಡವನಲ್ಲ. ರಾಷ್ಟ್ರೀಯ ನಾಯಕರು ಸೂಕ್ತ ಸಂದರ್ಭದಲ್ಲಿ ಅವಕಾಶ ನೀಡುತ್ತಾರೆ. ಎಂದರು.
ಬಿಎಸ್‌ವೈ ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ್ದು, ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದವರು. ದೇಶದ ಹಿರಿಯ ರಾಜಕಾರಣಿ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಕ್ಷೇತ್ರದ ಬಗ್ಗೆ ಗಮನ ಹರಿಸುತ್ತೇನೆ ಎಂದು ಉತ್ತರಿಸಿದರು.
ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಪ್ರೀತಂಗೌಡ, ಹಿಂದೆ ಎಸ್ಆರ್ ಬೊಮ್ಮಾಯಿ ಸರ್ಕಾರವನ್ನು ಬೀಳಿಸಿದ ದೇವೇಗೌಡರ ಮನೆಗೆ ಮುಖ್ಯಮಂತ್ರಿಗಳು ಆಶೀರ್ವಾದ ಪಡೆಯಲು ಹೋಗುತ್ತಾರೆ ಎಂದರೆ, ನಾನು ರಾಜಕೀಯ ಸನ್ಯಾಸಿಯಲ್ಲ. ನಾನು ಕೂಡ ಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಪ್ರೀತಂಗೌಡಗೆ, ರಾಜಕೀಯ ಅನುಭವ ಇಲ್ಲದ ವ್ಯಕ್ತಿ ಪ್ರೀತಮ್ ಅಂತ ವ್ಯಂಗ್ಯ ಹಾಡಿದ್ರು. ಅದಕ್ಕೆ ಪ್ರೀತಂ ಮತ್ತೆ ಟಾಂಗ್ ನೀಡಿದ್ದಾರೆ.