ಸಕಲೇಶಪುರ: ತಾಲೂಕಿನ ಹಲವೆಡೆ ಹೆಚ್ಚಿರುವ ಕಾಡಾನೆ ಸಮಸ್ಯೆಯನ್ನು ಸರ್ಕಾರ ಕೂಡಲೆ ಬಗೆಹರಿಸಲು ಮುಂದಾಗಬೇಕೆಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮಳಲಿ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಹಾನಿಗೀಡಾದ ಗ್ರಾಮಸ್ಥರ ತೋಟ , ಗದ್ದೆಗಳನ್ನು ಶಾಸಕರು ವೀಕ್ಷಿಸಿದ್ರು. ನಂತರ ಮಾತನಾಡಿ, ಮಳಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 40 ಕಾಡಾನೆಗಳು ಬೀಡು ಬಿಟ್ಟಿದ್ದು, ಸಾವಿರಾರು ಎಕರೆ ಕಾಫಿ ತೋಟ ಹಾಗೂ ಗದ್ದೆಗಳನ್ನು ನಾಶ ಮಾಡಿದೆ. ಆದರೂ ಕಾಡಾನೆ ಸಮಸ್ಯೆ ಬಗೆಹರಿಸಲು ಇನ್ನೂ ಸರ್ಕಾರ ಮುಂದಾಗಿಲ್ಲ. ಆನೆ ದಾಳಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸುಮಾರು ಒಂದೂವರೆ ಕೋಟಿಯಷ್ಟು ಪರಿಹಾರ ನೀಡಬೇಕಾಗಿರುವುದು ಬಾಕಿಯಿದೆ. ಈ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಚರ್ಚೆ ಮಾಡಿದಾಗ ಅರಣ್ಯ ಮಂತ್ರಿಗಳು ಇಲ್ಲಿಗೆ ಬಂದು ಪರಿಶೀಲನೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ರು.
ಸೋಲಾರ್ ಫೆನ್ನ್ಸಿಂಗ್‌ಗಿಂತ ಆನೆಗಳನ್ನು ಸ್ಥಳಾಂತರ ಮಾಡುವುದು ಸೂಕ್ತ ಮಾರ್ಗ. ಶ್ರೀಲಂಕಾ ಹಾಗೂ ಬೇರೆ ಬೇರೆ ದೇಶಗಳಲ್ಲಿ ಅನುಸರಿಸುತ್ತಿರುವ ಮಾರ್ಗಗಳನ್ನು ಪರಿಶೀಲಿಸಿ ಕೂಡಲೆ ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಎಂದರು. ಗ್ರಾಮಸ್ಥ ಶಾಂತರಾಜ್ ಮಾತನಾಡಿ , ಗ್ರಾಮದಲ್ಲಿ ಕಾಡಾನೆಗಳ ದಾಂಧಲೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪರಿಹಾರಕ್ಕಿಂತ ಹೆಚ್ಚಾಗಿ ಸೋಲಾರ್ ಫೆನ್ಸಿಂಗ್‌ನ್ನು ಹಾಕಿಸಿಕೊಡಬೇಕು ಎಂದರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಅರಣ್ಯಾಧಿಕಾರಿ ದಿನೇಶ್, ಮಹಾದೇವ್, ಗ್ರಾಮಸ್ಥರಾದ ಶಿವಣ್ಣ, ದಿನೇಶ್, ಸ್ವಾಮಿ, ಮುಂತಾದವರು ಹಾಜರಿದ್ದರು.