ಹಾಸನ: ನಗರದ ಕೋವಿಡ್ ಕೇಂದ್ರದಲ್ಲಿ ಆಹಾರದ ಪೂರೈಕೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದ್ದರಿಂದ ಸ್ವತಃ ಶಾಸಕರೇ ಸಿಸಿಸಿ ಕೆಂದ್ರಕ್ಕೆ ಭೇಟಿ ನೀಡಿ, ಊಟ ಮಾಡಿ ಆಹಾರದ ಗುಣಮಟ್ಟ ಪರೀಕ್ಷೆ ಮಾಡಿದ್ದಾರೆ.
ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಿತ್ಯ ದ್ವಿಶತಕದ ಅಂಚಿಗೆ ಸೋಂಕಿತರು ಪತ್ತೆಯಾಗುತ್ತಿದ್ದು, ಇಂದು ಜಿಲ್ಲೆಯಲ್ಲಿ 1025 ಸೋಂಕಿತರು ಪತ್ತೆಯಾಗಿದ್ದಾರೆ. ಅರಕಲಗೂಡಿನ ಬೆಳವಡಿಯಲ್ಲಿ ಒಂದೇ ದಿನ 56 ಮಂದಿಗೆ ಕೊರೊನಾ ತಗುಲಿರುವ ಪರಿಣಾಮ ತಾಲೂಕಿನಲ್ಲಿ ಭಯದ ವಾತಾವರಣವನ್ನು ಹುಟ್ಟಿಸಿದೆ.
ಜಿಲ್ಲೆಯಲ್ಲಿ ಇದುವರೆವಿಗೂ ಸುಮಾರು 9,270 ಮಂದಿ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದಿರುವುದು ರೋಗ ಲಕ್ಷಣದ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಇದರ ನಡುವೆ ಸಿಸಿಸಿ ಕೇಂದ್ರದಲ್ಲಿ ಸರಿಯಾದ ಆಹಾರದ ವ್ಯವಸ್ಥೆಗಳಿಲ್ಲ, ಮೂಲ ಸೌಕರ್ಯಗಳಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆ ಸ್ವತಃ ಶಾಸಕದ್ವಯರೇ ಸಿಸಿಸಿ ಕೇಂದ್ರಕ್ಕೆ ತೆರಳಿ ಊಟ ಮಾಡುವ ಮೂಲಕ ಬಂದ ಆರೋಪವನ್ನು ಹುಸಿ ಎಂದು ತೋರಿಸಿ ಕೊಟ್ಟಿದ್ದಾರೆ.
ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ತಮ್ಮ ವ್ಯಾಪ್ತಿಯ ಕಬ್ಬಳಿಗೆರೆ ಮತ್ತು ಬರಗೂರು ಸಿಸಿಸಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೋಂಕಿತರ ಆರೋಗ್ಯವನ್ನು ವಿಚಾರಿಸಿದ ನಂತರ, ಅಲ್ಲಿಯೇ ಊಟ ಮಾಡಿದರೆ, ಚನ್ನರಾಯಪಟ್ಟಣ ಶಾಸಕ ಸಿ.ಎಸ್. ಬಾಲಕೃಷ್ಣ ತಮ್ಮ ವ್ಯಾಪ್ತಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಸಮಸ್ಯೆಯನ್ನು ಆಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರೋ ತಾಲೂಕು ಅಂದರೆ ಅದು ಚನ್ನರಾಯಪಟ್ಟಣ. ಪ್ರತಿನಿತ್ಯ ರೋಗಿಗಳಿಗೆ ಹಣ್ಣು, ಹಾಲು, ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೇವೆ. ಉದ್ಯೋಗಕ್ಕಾಗಿ ಹೊರ ಜಿಲ್ಲೆ ಮತ್ತು ರಾಜ್ಯಕ್ಕೆ ಹೋಗಿದ್ದವರು ವಾಪಸ್ ತವರು ಜಿಲ್ಲೆಗೆ ಬರುತ್ತಿದ್ದು, ಅಂಥವರನ್ನು ನೇರವಾಗಿ ಸಿಸಿಸಿ ಕೆಂದ್ರಕ್ಕೆ ಕಳುಹಿಸಲಾಗುತ್ತಿದೆ. ಈಗಾಗಲೇ 100ಕ್ಕೂ ಅಧಿಕ ಮಂದಿ ಗುಣಮುಖವಾಗಿ ಹೊರಹೋಗಿದ್ದಾರೆ. ನಮ್ಮ ಭಾಗಕ್ಕೆ ಬೆಂಗಳೂರು ಕಡೆಯಿಂದ ಬರುವವರೇ ಹೆಚ್ಚು. ಸರ್ಕಾರ ಮೊದಲೇ ಮುನ್ನೆಚ್ಚರಿಕಾ ಕ್ರಮ ವಹಿಸಿದ್ರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆಯಿಂದ ಸಾವಿಗೀಡಾದ ಪ್ರಕರಣವಿಲ್ಲ. ಈಗಾಗಲೇ ಸಂಚಾರಿ ಬಸ್ ಪ್ರತಿನಿತ್ಯ ಗ್ರಾಮಗಳಿಗೆ ಭೇಡಿ ನೀಡಿ ಅಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡುತ್ತಿದ್ದು, ಸೋಂಕು ಕಂಡುಬಂದವರನ್ನು ನೇರವಾಗಿ ಸಿಸಿಸಿಗೆ ಸೇರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಓದಿ: ರಾಜ್ಯ ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ಭಾರೀ ಮಳೆ, ಕೆಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್