ಅರಕಲಗೂಡು (ಹಾಸನ) : ತಾಲೂಕಿನ ಚಿಕ್ಕಗಾವನಗಳ್ಳಿ ಗ್ರಾಮದಲ್ಲಿ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಸಾವನ್ನಪ್ಪಿವೆ.
ಸತ್ತ ಮೀನುಗಳ ಕಳೇಬರ ನೀರಿನಲ್ಲಿ ತೇಲುತ್ತಿವೆ. ಊರ ಮುಂಭಾಗದ ಕೆರೆಗೆ ಗ್ರಾಮಸ್ಥರು ಒಟ್ಟಾಗಿ ಕಳೆದ ವರ್ಷ ಸುಮಾರು 30 ಸಾವಿರ ರೂಪಾಯಿ ವ್ಯಯಿಸಿ ವಿವಿಧ ತಳಿಯ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಬೆಳವಣಿಗೆ ಹಂತದಲಿದ್ದ ಮೀನುಗಳಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆರೆಗೆ ಸುಮಾರು 40 ಸಾವಿರ ಮೀನು ಮರಿಗಳನ್ನು ಬೆಳೆಸಲು ಬಿಡಲಾಗಿತ್ತು. ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಕೆರೆಗೆ ಕಳೆನಾಶಕ ಹಾಕಿ ಮೀನುಗಳನ್ನು ಸಾಯಿಸಿದ್ದು, ಅಪಾರ ನಷ್ಟವಾಗಿದೆ. ನಿತ್ಯವೂ ನೂರಾರು ಮೀನುಗಳು ಪ್ರಾಣ ಕಳೆದುಕೊಂಡು ನೀರಿನಲ್ಲಿ ಸತ್ತು ತೇಲುತ್ತಿವೆ. ಒಂದೆರಡು ದಿನದಲ್ಲಿ ಮೀನುಗಳು ಪೂರ್ತಿಯಾಗಿ ಸಾಯಲಿವೆ. ಕರೊನಾ ಲಾಕ್‌ಡೌನ್‌ನಿಂದಾಗಿ ಜನರು ಮೊದಲೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ಇದೀಗ ಕೆರೆಯಲ್ಲಿದ್ದ ಜೀವಂತ ಮೀನುಗಳನ್ನು ಕಳೆದುಕೊಂಡು ಚಿಂತಿತರಾಗಿದ್ದೇವೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಸತ್ತ ಮೀನುಗಳನ್ನು ಕೆರೆ ದಡಕ್ಕೆ ತಂದು ಅಲ್ಲಲ್ಲಿ ರಾಶಿ ಹಾಕಲಾಗಿದ್ದು, ದುರ್ವಾಸನೆ ಸೂಸುತ್ತಿದೆ. ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.