ಹಾಸನ: ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೃಕೆ ಸಮಸ್ಯೆಗಳಿಲ್ಲದಂತೆ ಅಧಿಕಾರಿಗಳು ನಿಗಾವಹಿಸಬೇಕು ಹಾಗೂ ಈಗಾಗಲೇ ಪ್ರಾರಂಭಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವರು ನಡೆಸಿದ್ರು. ಜಿಲ್ಲೆಯಲ್ಲಿ ಕಾವೇರಿ ಮತ್ತು ಹೇಮಾವತಿ ನದಿ ಹರಿಯುತ್ತಿದ್ದರೂ, ಹಲವೆಡೆ ಇನ್ನೂ ಕುಡಿಯುವ ನೀರಿನ ಸಮಸ್ಯೆಗಳಿವೆ. ಅದನ್ನು ಶೀಘ್ರ ಬಗೆಹರಿಸಿ ಯಾವುದಾದರೊಂದು ಯೋಜನೆಯಲ್ಲಿ ನೀರು ನೀಡಿ ಎಂದರು.
ಹಾಲಿ ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ, ಅಮೃತ ಯೋಜನೆ, ಜಲಧಾರೆ ಹಾಗೂ ಇತರ ಯೋಜನೆಗಳಲ್ಲಿ ಪ್ರಾರಂಭಿಸಲಾಗಿರುವ ಕೆಲಸಗಳು ಬೇಗ ಮುಗಿಯಬೇಕು. ಅರಸೀಕೆರೆ ತಾಲೂಕಿನಲ್ಲಿ ಯಗಚಿ, ಹೇಮಾವತಿ ಜಲಾಶಯದಿಂದ ನೀರು ಪೂರೈಸುವ ಬಹುಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗುವುದು. ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಿ ಎಂದು ಸಚಿವರು ಸೂಚನೆ ನೀಡಿದರು.
ಹಾಸನ ಕ್ಷೇತ್ರ ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಹಾಸನ ನಗರ ಬೆಳೆಯುತ್ತಿದೆ ಇದಕ್ಕೆ ಹೊಂದಿಕೊಂಡಿರುವ 8 ಗ್ರಾಮ ಪಂಚಾಯಿತಿಗಳಲ್ಲಿ, ಸುಮಾರು 80 ಸಾವಿರ ಜನರಿದ್ದಾರೆ. ಪ್ರತಿ ದಿನ ಕೊಳವೆ ಬಾವಿ ನೀರನ್ನೇ ಆಶ್ರಯಿಸಬೇಕಾಗಿದೆ. ಹಾಲಿ ಚಾಲ್ತಿಯಲ್ಲಿರುವ ಅಮೃತ ಯೋಜನೆಯನ್ನು ಈ ಭಾಗದ ನೀರು ಪೂರೈಕೆಗೆ ವಿಸ್ತರಣೆ ಮಾಡಲು ಕಷ್ಟವಾಗಿದೆ. ಹಾಗಾಗಿ ಹೇಮಾವತಿ ನದಿಯಿಂದ ಹಾಸನ ಕಸಬಾ ಸಾಲಗಾಮೆ, ಕಟ್ಟಾಯ ಹೋಬಳಿಗಳಿಗೆ ನೀರು ಪೂರೈಸುವ ಹೊಸ ಯೋಜನೆ ಜಾರಿಗೊಳಿಸಿ ಎಂದು ಹೇಳಿದರು.