ಹಾಸನ: ಸಚಿವ ಸಂಪುಟವನ್ನು ಯಾವಾಗ ವಿಸ್ತರಣೆ ಮಾಡಬೇಕು ಎಂಬುದನ್ನು ರಾಜ್ಯದ ನಾಯಕರ ಜೊತೆ ಸಮಾಲೋಚನೆ ಮಾಡಿ ಕೇಂದ್ರದ ನಾಯಕರು ನಿರ್ಧರಿಸುತ್ತಾರೆ. ಆದ್ರೆ, ಮುಂದಿನ ಎರಡು ತಿಂಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ನಮ್ಮ 120 ಶಾಸಕರಲ್ಲಿ ಯಾವ ಅಸಮಾಧಾನಗಳೂ ಇಲ್ಲ. ನಿಷ್ಠವಂತ ಕಾರ್ಯಕರ್ತರು ಇಲ್ಲಿದ್ದೇವೆ. ಪ್ರತ್ಯೇಕ ರಾಜ್ಯದ ಕುರಿತು ಉಮೇಶ್ ಕತ್ತಿ ಯಾವ ಹಿನ್ನೆಲೆಯಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಅವರು ಯಾವುದೋ ಒಂದು ಆಲೋಚನೆ ಇಟ್ಟುಕೊಂಡು ಹೇಳಿರಬಹುದು. ನಾಳೆ, ನಾಡಿದ್ದು ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ನಮ್ಮ ಪೂರ್ವಜರು ಬಹಳ ಕಷ್ಟಪಟ್ಟು ಅಖಂಡ ರಾಜ್ಯವನ್ನಾಗಿ ಮಾಡಿದ್ದಾರೆ. ಅಖಂಡ ರಾಜ್ಯವಾಗಿಯೇ ಮುಂದುವರೆಯಬೇಕು ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೂಡ ಸಮಬಲ ಸಾಧಿಸಿದೆ. ಪ್ರತಿಪಕ್ಷದವರು ಮತ್ತೆ ಬಲಿಷ್ಠವಾಗುವ ಕನಸು ಇಟ್ಟುಕೊಂಡಿದ್ದಾರೆ. ಆದ್ರೆ, ಒಂದೆರಡು ಪರಿಷತ್ ಚುನಾವಣೆ ಗೆದ್ದ ತಕ್ಷಣ ಸಮಬಲ ಬರಲು ಆಗುವುದಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜು: ರಾಹುಲ್ ಗಾಂಧಿ ಭಾಗಿ, ಐದು ಲಕ್ಷ ಜನ ಸೇರುವ ಸಾಧ್ಯತೆ