ಹಾಸನ: ದಿನದಿಂದ ದಿನಕ್ಕೆ ಹಾಸನದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ಎ ಮಂಜು ನಡುವೆ ಜಿದ್ದಾಜಿದ್ದಿ ಶುರುವಾಗಿದೆ.
ಜಿಲ್ಲೆಯಲ್ಲಿಂದು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಎ ಮಂಜು ಬೇರೆ ಬೇರೆ ತಾಲೂಕುಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ದೇವೇಗೌಡರು ಮತ್ತು ಅವರ ಕುಟುಂಬ ತಮ್ಮ ಮನೆ ದೇವರಾದ ಯಲಿಯೂರಿನ ಲಕ್ಷ್ಮಿದೇವಿ ದೇವಸ್ಥಾನಕ್ಕೆ ತೆರಳಿ ಚುನಾವಣಾ ಪ್ರಚಾರ ಆರಂಭಿಸಿದರೆ, ಬಿಜೆಪಿಯ ಎ ಮಂಜು ಚನ್ನರಾಯಪಟ್ಟಣದ ದೊಡ್ಡ ಆಂಜನೇಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದರು.
ಮೈತ್ರಿ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದ ಎ. ಮಂಜು ಕಾಂಗ್ರೆಸ್ ತೊರೆದು ಮಾತೃಪಕ್ಷ ಬಿಜೆಪಿಯಿಂದ ಅಭ್ಯರ್ಥಿಯಾಗುವ ಮೂಲಕ ಮೈತ್ರಿ ಪಕ್ಷದ ಪ್ರಜ್ವಲ್ ವಿರುದ್ಧ ತೊಡೆ ತಟ್ಟಿದ್ದಾರೆ. ಜಿಲ್ಲೆ ಜೆಡಿಎಸ್ ವಶದಲ್ಲಿದೆ. ಈ ಮಧ್ಯೆ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ.
ಬೆಳಗ್ಗೆಆಂಜನೇಯ ದೇವಾಲಯದಿಂದ ಹೊರಟ ಎ ಮಂಜು ಗಾಂಧಿ ಸರ್ಕಲ್, ಗಾಯತ್ರಿ ಬಡಾವಣೆ, ಬಾಗೂರು ರಸ್ತೆಯಲ್ಲಿ ಕಾಲ್ನಡಿಗೆ ಜಾಥ ಮೂಲಕ ಸಾಗಿ ಮತಬೇಟೆ ಬಳಿಕ ಬಾಗೂರು ಕಡೆ ಪಯಣ ಬೆಳೆಸಿದರು.