ಕೊಣನೂರು: ಚಿರತೆಯೊಂದು ಮೇಕೆಯ ಮೇಲೆ ದಾಳಿ ಮಾಡಿ, ಅದನ್ನ ಬಲಿ ತೆಗೆದುಕೊಂಡಿರುವ ಘಟನೆ ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅರಕಲಗೂಡಿನ ಕೊಣನೂರು ಹೋಬಳಿಯ ಅಂಕನಹಳ್ಳಿ ಅಂಕನಹಳ್ಳಿ ಗ್ರಾಮದ ಚಂದ್ರೇಗೌಡ ಎಂಬುವವರು ಭಾನುವಾರ ರಾತ್ರಿ ಮನೆಯ ಕೊಟ್ಟಿಗೆಯಲ್ಲಿ ತಮ್ಮ ಮೇಕೆಯನ್ನು ಕಟ್ಟಿದ್ದರು. ಬಳಿಕ, ನಡುರಾತ್ರಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಆ ಮೇಕೆಯನ್ನು ಹೊರಕ್ಕೆ ಎಳೆದೊಯ್ದು ಅರ್ಧ ಭಾಗವನ್ನು ತಿಂದು ಉಳಿದುದನ್ನು ಬಿಟ್ಟು ಪರಾರಿಯಾಗಿದೆ.
ಬೆಳಗ್ಗೆ ಮನೆಯ ಯಜಮಾನ ಚಂದ್ರೇಗೌಡರವರು ಮೇಕೆ ಕಾಣದಿದ್ದರಿಂದ ಹಾಗೂ ಅಲ್ಲಿಯೇ ಬಿದ್ದಿದ್ದ ರಕ್ತದ ಕಲೆಗಳನ್ನು ನೋಡಿ ಅದನ್ನೇ ಹಿಂಬಾಲಿಸಿದಾಗ ಮೇಕೆ ಬಲಿಯಾದ ವಿಷಯ ತಿಳಿದು ಬಂದಿದೆ. ನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಪರಿಶೀಲಿಸಿ ಮೇಕೆಯನ್ನು ಚಿರತೆಯೇ ತಿಂದಿದೆ. ಕೊಡಗಿಗೆ ಸಮೀಪವಿರುವ ಈ ಭಾಗದ ಗ್ರಾಮಸ್ಥರು ಬಹಳ ಎಚ್ಚರದಿಂದಿರಬೇಕೆಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರು ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಇನ್ನೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.