ಅರಕಲಗೂಡು(ಹಾಸನ): ಎ.ಟಿ.ರಾಮಸ್ವಾಮಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ಗೆ ಹೋಗಲಿದ್ದಾರೆ, ಆಮ್ ಆದ್ಮಿ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡು ಪಕ್ಷ ತ್ಯಜಿಸುವ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ತಾಲೂಕಿನ ಮಲ್ಲಿತಮ್ಮನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ದೇವಮ್ಮ ದೇವಿ ಮತ್ತು ಗ್ರಾಮ ದೇವತೆಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ರೇವಣ್ಣರೊಂದಿಗೆ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಸ್ವಾಮಿ, ನಾನು ಕೊಟ್ಟ ಸಲಹೆ ಕೇಳಿದ್ದರೆ ಕುಮಾರಸ್ವಾಮಿಯವರೇ, ಶಾಶ್ವತ ಮುಖ್ಯಮಂತ್ರಿ ಆಗಿರುತ್ತಿದ್ದರು. ನಾನು ಹೇಳಿದ್ದನ್ನು ನೀವು ಯಾಕೆ ಕೇಳಿಲ್ಲವೋ ಗೊತ್ತಿಲ್ಲ. ಬಹುಶಃ ನೀವು ಹೆಚ್.ಡಿ.ರೇವಣ್ಣ ಅವರ ಮಾತು ಕೇಳಿದ್ರೋ ಏನೋ ಎಂದು ಕುಟುಕಿದರು. ಈ ನಡುವೆ ಬಂದು ಮಾತನಾಡಿದ ಮಾಜಿ ಸಚಿವ ರೇವಣ್ಣ, ಅಭಿವೃದ್ಧಿಯಲ್ಲಿ ನಾನು ಎಂದೂ ರಾಮಸ್ವಾಮಿ ಅವರನ್ನು ಮೀರಿಸಲು ಆಗಲ್ಲ. ಒಂದು ಬಾರಿ ನಿಮ್ಮನ್ನು ಮಂತ್ರಿ ಮಾಡಬೇಕು ಎಂಬುವುದು ನನ್ನ ಆಸೆ ಎನ್ನುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಚಿವರಾಗಿ ಮಾಡುವ ಭರವಸೆ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮಸ್ವಾಮಿ, ನಾನು ಸಚಿವನಾಗಬೇಕು ಎಂದು ಬಯಸಿಲ್ಲ. ಹಾಗೆ ಬಯಸಿದ್ದರೆ ಎಂದೋ ಆಗಬಹುದಿತ್ತು. ಸಾಕಷ್ಟು ಬಾರಿ ನನ್ನನ್ನು ಕರೆದಿರುವ ಬಗ್ಗೆ ನಿಮಗೆ ಗೊತ್ತಿರುವ ವಿಚಾರ. ನಾನು ಎಂದು ಕೈವೊಡ್ಡಿ ಬೇಡಿದವನಲ್ಲ. ನಮ್ಮ ನಾಯಕರಿಗೆ ಎಂದು ಕೆಟ್ಟ ಹೆಸರು ಬರದಂತೆ ನೋಡಿಕೊಂಡಿದ್ದೇನೆ ಎಂಬ ವಿಶ್ವಾಸ ನನಗಿದೆ. ದುಷ್ಟ, ದುರಾಸೆಯ, ಲೂಟಿಕೋರರೇ ಇಂದು ಜಾಸ್ತಿ ಇದ್ದಾರೆ. ಇದೆಲ್ಲದರ ನಡುವೆ ಸಾರ್ವಜನಿಕ ಜೀವನದಲ್ಲಿ ಈಜಿಕೊಂಡು ಹೋಗುವುದು ಬಹಳ ಕಷ್ಟ ಎಂದರು.