ಹಾಸನ: ಈಗಾಗಲೇ ನ್ಯಾಯಾಲಯವು ಗ್ರಾಮ ಪಂಚಾಯತಿ ಚುನಾವಣೆ ಮಾಡುವಂತೆ ಆದೇಶ ನೀಡಿದೆ. ನಾವು ಚುನಾವಣೆ ಮಾಡಲು ಸಂಪೂರ್ಣ ತಯಾರಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದಿದ್ದೇವೆ. ಕೊರೊನಾ ಆದಷ್ಟು ಬೇಗ ದೂರಾಗಿ ಎಲ್ಲವೂ ಸಹಜ ಸ್ಥಿತಿಗೆ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ ಎಂದರು.
ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಬೇಕು. ಇದು ಸರ್ಕಾರದ ಕೆಲಸ, ಪಕ್ಷದ ಕೆಲಸವಲ್ಲ. ನ್ಯಾಯಾಲಯ ನೀಡಿದ ತೀರ್ಮಾನವನ್ನು ನಾವು ಒಪ್ಪುತ್ತೇವೆ. ಕೊರೊನಾ ಹಿನ್ನೆಲೆ ಯಾರಿಗೂ ತೊಂದರೆಯಾಗಬಾರದು ಎಂಬ ಅಭಿಪ್ರಾಯವಿತ್ತು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಕೇಂದ್ರದ ನಾಯಕರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ತೀರ್ಮಾನಕ್ಕೆ ನಮ್ಮ ಪಕ್ಷದ ಎಲ್ಲಾ ಶಾಸಕರು ಬದ್ಧರಾಗಿದ್ದೇವೆ ಎಂದರು.
ಬೇರೆ ಪಕ್ಷಗಳಿಗೆ ಚುನಾವಣೆ ಅಂದ್ರೆ ಚಳಿಜ್ವರ ಬಂದಂತೆ ಆಗಿದೆ. ಚುನಾವಣಾ ಫಲಿತಾಂಶ ನೋಡಿ ಯಾಕಪ್ಪ ಚುನಾವಣೆ ಬಂತು ಅಂತಿದ್ದಾರೆ. ಚುನಾವಣೆ ಪೂರ್ವದಲ್ಲಿ ಉಪ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಅಂತಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಹೇಳುತ್ತಿದ್ದರು. ನಾವು ಹೌದು ಎಂದು ಸವಾಲಾಗಿ ಸ್ವೀಕರಿಸಿದ್ದೆವು. ಅಂದುಕೊಂಡಂತೆ ಎರಡೂ ಕ್ಷೇತ್ರದಲ್ಲಿ ಗೆದ್ದು ತೋರಿಸಿದ್ದೇವೆ ಎಂದರು.
ಕಾಂಗ್ರೆಸ್ ನಾಯಕರಲ್ಲಿ ಇಬ್ಬಗೆಯ ನೀತಿ ಇದೆ. ಯಾವಾಗಲೂ ಸರ್ಕಾರದ ಪರವಾಗಿ ಉಪ ಚುನಾವಣೆ ಫಲಿತಾಂಶ ಬರುತ್ತೆ ಅಂತಾ ಸಿದ್ದರಾಮಯ್ಯ ಈಗ ಹೇಳುತ್ತಿದ್ದಾರೆ. ಆದರೆ ಡಿಕೆ.ಶಿವಕುಮಾರ್ ಚುನಾವಣೆ ನಡೆದಿದ್ದೇ ಸರಿಯಿಲ್ಲ ಅಂತಾರೆ. ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬುದು ನನಗೆ ಗೊತ್ತು. ಆದರೆ ಹೇಳಿಕೆಗಳನ್ನು ಕೊಡುವುದರಲ್ಲಾದರೂ ಒಟ್ಟಿಗೆ ಇರಲಿ ಎಂದು ಸಲಹೆ ನೀಡಿದರು.
ಒಂದೆಡೆ ಡಿಕೆಶಿ ತಮ್ಮ ಶಿಷ್ಯರ ಮುಖಾಂತರ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸಿಕೊಂಡರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಫಾಲೋವರ್ಸ್ಗಳಿಂದ ಮುಂದಿನ ಮುಖ್ಯಮಂತ್ರಿ ತಾವು ಎಂದು ಹೇಳಿಸಿಕೊಂಡರು. ಇದರಿಂದ ಇವರದ್ದು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಸೋತ ನಂತರ ಮರ್ಯಾದೆಯಿಂದ ಒಪ್ಪಿಕೊಳ್ಳಬೇಕು. ಕುಮಾರಸ್ವಾಮಿ, ರೇವಣ್ಣ, ಡಿ.ಕೆ.ಶಿವಕುಮಾರ್ ಯಾರೇ ಆಗಲಿ ಜನರ ತೀರ್ಪನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತಿಗೆ ತಿರುಗೇಟು ನೀಡಿದರು.