ಹಾಸನ: ನಾಡಧ್ವಜ ಸುಟ್ಟು ಹಾಕುವ ಮೂಲಕ ಕನ್ನಡಿಗರ ಹಾಗೂ ಮರಾಠಿಗರ ಸೌಹಾರ್ದತೆ ಕದಡಿ ಗಡಿಯಲ್ಲಿ ಭಯದ ಪರಿಸ್ಥಿತಿ ನಿರ್ಮಿಸಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗ ಪ್ರತಿಭಟನೆ ನಡೆಸಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿದ ಅವರು, ಕನ್ನಡಿಗರು ಶಾಂತಿ ಪ್ರಿಯರು ಹಾಗೂ ಸಹಿಷ್ಟುಗಳು ಆದರೇ ಗಡಿ ಭಾಗಗಳಲ್ಲಿರುವ ರಾಜ್ಯಗಳು ವಿನಾಕಾರಣ ಸದಾ ಒಂದಲ್ಲೊಂದು ವಿಚಾರವನ್ನು ಕೆದಕಿ ನಮ್ಮ ಮೇಲೆ ಆಕ್ರಮಣ ಮಾಡುತ್ತಾ ನಮ್ಮ ಸಹನೆಯನ್ನು ಕೆಣಕುತ್ತಿದ್ದಾರೆ ಎಂದು ದೂರಿದರು. ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜವನ್ನು ಸುಟ್ಟು, ಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿದಲ್ಲದೇ ಗಡಿಭಾಗಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಕೂಡ ನಿಲ್ಲಿಸಿ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ನಿಷೇಧಿಸಿ ದೇಶದಲ್ಲಿ ಶಾಶ್ವತವಾದ ಶಾಂತಿ ನೆಲೆಸುವಂತೆ ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಮಾಡಿದರು.