ಸಕಲೇಶಪುರ(ಹಾಸನ): ಸಕಲೇಶಪುರ ಪಟ್ಟಣ ವ್ಯಾಪ್ತಿಯ ಕಸ ವಿಲೇವಾರಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವಂತೆ ಆಗ್ರಹಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪ್ರತಿಭಟಿಸಲಾಯಿತು.
ಪಟ್ಟಣದ ಜಾತ್ರಾ ಮೈದಾನದಲ್ಲಿ ತಂದು ಹಾಕುತ್ತಿರುವ ಕಸದಿಂದ ಅಪಾಯಕಾರಿ ಸೊಳ್ಳೆಗಳು ಹಾಗೂ ಇನ್ನಿತರ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಇಲ್ಲಿನ ಗ್ಯಾರೇಜ್ ಲೈನ್ ಕೆಲಸಗಾರರು ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ದನಕರುಗಳು ಈ ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ತಿಂದು ಸಾವಿಗೀಡಾಗುತ್ತಿವೆ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲಹರಣ ಮಾಡುತ್ತಾ ಪಟ್ಟಣದ ಹೃದಯ ಭಾಗದಲ್ಲಿ ಈ ರೀತಿ ಕಸವನ್ನು ತಂದು ಹಾಕುತ್ತಿರುವುದು ದುರಂತವಾಗಿದೆ.
ಮಳಲಿ ಗ್ರಾಮದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತೇವೆಂದು ಹೇಳಿದ್ದರು. ಆದರೆ, ಕಳೆದ 3 ತಿಂಗಳಿನಿಂದ ಯಾವುದೇ ಕೆಲಸ ಆರಂಭಿಸದೆ ಸಮಯ ಹರಣ ಮಾಡುತ್ತಿದ್ದಾರೆ. ಪ್ರತಿಭಟನೆಯ ಸುದ್ದಿ ತಿಳಿದು ಪುರಸಭೆಯವರು ರಾತ್ರೋ ರಾತ್ರಿ ಮೈದಾನದಲ್ಲಿದ್ದ ಕಸವನ್ನು ಪಕ್ಕದಲ್ಲಿರುವ ಚಿಕ್ಕ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರ ಮಾಡಿದ್ದಾರೆ. ಗ್ಯಾರೇಜ್ ಲೈನ್ಗಳ ಮಾಲೀಕರು ಹಾಗೂ ಕಾರ್ಮಿಕರುಗಳಿಗೆ ಪುರಸಭೆಯವರು ಇಲ್ಲ-ಸಲ್ಲದ ಬೆದರಿಕೆ ಹಾಕಿ, ಪ್ರತಿಭಟನೆಗೆ ಬಾರದಂತೆ ಮಾಡಿದ್ದಾರೆ. ಸಮಸ್ಯೆಯನ್ನು ಬಗೆಹರಿಸದ ಹಿನ್ನೆಲೆ, ಪ್ರತಿಭಟನೆ ಮಾಡಲಾಗುತ್ತಿದೆ. ಕೂಡಲೇ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಸ್ಥಳಕ್ಕೆ ಆಗಮಿಸಿದ ಪುರಸಭಾ ಮುಖ್ಯಾಧಕಾರಿ ಸ್ಟೀಫನ್ ಪ್ರಕಾಶ್, ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮಳಲಿ ಗ್ರಾಮದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಈಗಾಗಲೇ ಕಂಪನಿಯೊಂದು ಟೆಂಡರ್ ಪಡೆದುಕೊಂಡಿದ್ದು, ಇನ್ನು ಮೂರು ತಿಂಗಳ ಒಳಗೆ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.