ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಬೆನ್ನಲ್ಲೇ ಜೆಡಿಎಸ್ ಪಕ್ಷವು ಸ್ಟಾರ್ ಪ್ರಚಾರಕರ ಹೆಸರನ್ನು ಪ್ರಕಟಿಸಿದೆ. ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರಿಗೆ ಸ್ಟಾರ್ ಪ್ರಚಾರಕರ ಸ್ಥಾನವನ್ನು ನೀಡಲಾಗಿದೆ. ಜೊತೆಗೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸೇರಿದಂತೆ 27 ಮಂದಿ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಟಿ ಎ ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ.
ಮುಖಂಡರಾದ ಬಿ ಎಂ ಫಾರೂಕ್, ಜಫ್ರುಲ್ಲಾಖಾನ್, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಅಪ್ಪಾಜಿಗೌಡ, ರಮೇಶ್‌ಗೌಡ, ಎ.ಪಿ.ರಂಗನಾಥ್, ನಜ್ಮಾ ನಜೀರ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬು ಬುಕರಿ, ಬಸವರಾಜ್ ಕೊಡಾಂಬಲ್, ಶಾ ಉಲ್ ಹಕ್ ಬುಕರಿ, ಅಫ್ಜಲ್ ಅವರಿಗೆ ಸಹ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್: ಭವಾನಿ ರೇವಣ್ಣ ಭಿನ್ನಮತದ ನಡುವೆ ಗೆದ್ದು ಬೀಗುತ್ತಾರಾ ಸ್ವರೂಪ್?
ಹಾಸನದಲ್ಲಿ ದೇವೇಗೌಡರ ಪ್ರಚಾರ : ಇಂದು ಹಾಸನಕ್ಕೆ ತೆರಳುವ ಹೆಚ್ ಡಿ ದೇವೇಗೌಡರು ಹಾಸನದ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪರ ಪ್ರಚಾರ ನಡೆಸಲಿದ್ದಾರೆ. ಬಳಿಕ ಅರಸೀಕೆರೆಗೆ ತೆರಳಿ ಎನ್.ಆರ್. ಸಂತೋಷ್ ಪರ ಪ್ರಚಾರ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಇಂದು ಬೆಳಗ್ಗೆ 8.30 ಕ್ಕೆ ಎಚ್‌ಎಎಲ್ ವಿಮಾನ ನಿಲಾಣದಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ತೆರಳಲಿದ್ದಾರೆ. ಅಲ್ಲಿನ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನೆರವೇರುವ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಇದನ್ನೂ ಓದಿ : ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಸೃಷ್ಟಿಸಿದ ಭವಾನಿ ರೇವಣ್ಣ ಹೇಳಿಕೆ: ಜೆಡಿಎಸ್ ವರಿಷ್ಠರ ನಡೆ ಏನು?
ಹಾಸನದ ಎನ್ ಆರ್ ವೃತ್ತದ ಬಳಿ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನದ ವೇಳೆ ಅರಸೀಕರೆಗೆ ತಲುಪಿ ಎನ್.ಆರ್. ಸಂತೋಷ್ ಪರ ಪ್ರಚಾರ ಮಾಡಲಿದ್ದಾರೆ. ಎರಡು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಬಳಿಕ ಬೆಂಗಳೂರಿಗೆ ವಾಪಸ್ ಅಗಲಿದ್ದಾರೆ. ಮೊನ್ನೆ ಕಡೂರು ಕ್ಷೇತ್ರಕ್ಕೆ ತೆರಳಿ ವೈ ಎಸ್ ವಿ ದತ್ತ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ದೊಡ್ಡಗೌಡರು ಭಾಗವಹಿಸಿದ್ದರು.