ಹಾಸನ : ಬಿಜೆಪಿ ಸರ್ಕಾರ ಬಂದ ಬಳಿಕ ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದು, ಈ ಸಂಬಂಧ ಜನರ ಹಿತದೃಷ್ಟಿಯಿಂದ ಜ. 25ರಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದ ಪರಿಣಾಮ ತಕ್ಷಣ ಮುಖ್ಯಮಂತ್ರಿಗಳು ಸ್ಪಂದಿಸಿದ್ದರೂ, ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯ ಮೂಲಕ ನಾವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ತಕ್ಷಣ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಕೋವಿಡ್-19 ಮತ್ತು ಇತರೆ ಕಾರಣಗಳಿಂದ ಹಾಸನ ಜಿಲ್ಲೆಯನ್ನು ಕಡೆಗಣಿಸಿದ್ದೇವೆ ಎಂಬ ನಿಮ್ಮ ಅಹವಾಲನ್ನು ನಾನು ಪಡೆದಿರುವೆ. ತಕ್ಷಣ ನಿಮ್ಮೆಲ್ಲ ಅಹವಾಲುಗಳನ್ನು ಈಡೇರಿಸುವ ಭರವಸೆಯನ್ನು ಪತ್ರದ ಮೂಲಕ ತಿಳಿಸಿದ್ದೇನೆ. ದಯಮಾಡಿ ಜೆಡಿಎಸ್ ಪಕ್ಷದ ಯಾರೊಬ್ಬ ಶಾಸಕರು ಮತ್ತು ಮಾಜಿ ಪ್ರಧಾನಿಗಳು ತಮ್ಮ ಮನೆಯ ಮುಂದೆ ಪ್ರತಿಭಟನೆ ಮಾಡದಂತೆ ಸಿಎಂ ಕೋರಿದ್ದಾರೆ.
ಪತ್ರಿಕಾಗೋಷ್ಠಿಯ ಮೂಲಕ ಮಾಡಿದ್ದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿರುವುದು ಸ್ವಾಗತಾರ್ಹ, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, ಇಂಥ ಎಷ್ಟೋ ಭರವಸೆಗಳನ್ನು ಮುಖ್ಯಮಂತ್ರಿಗಳು ನಮಗೆ ನೀಡಿದ್ದು, ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಹೀಗಾಗಿ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.
ಹಾಸನ ಜಿಲ್ಲೆಗೆ ಸುಮಾರು 144 ಕೋಟಿ ರೂ. ಅನುದಾನ ಬರಬೇಕು. ಆದರೆ, ಈವರೆಗೂ ಯಾವೊಬ್ಬ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದೆ ಪಕ್ಕದ ಚಿಕ್ಕಮಗಳೂರಿಗೆ ₹48 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಎಷ್ಟು ಸರಿ? ನಾನು ಅವರಿಗೂ ಬಿಡುಗಡೆ ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ, ನಮಗೆ ಬಿಡುಗಡೆ ಮಾಡಲು ಕಾರಣ ಕೊಡುವ ನೀವು ಪಕ್ಕದ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿ ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಆದೇಶ ಮಾಡುವುದು ಇಬ್ಬಗೆಯ ನೀತಿ ಬಗೆದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಅಥವಾ ಅಲ್ಪ ಮಳೆಯಾದ್ರೂ ಕೂಡ ಅಲ್ಲಿಗೆ ಪರಿಹಾರ ಹಣ ನೀಡಿದ್ದಾರೆ. ಆದರೆ, ಅತಿ ಹೆಚ್ಚು ಮಳೆಯಾಗುವ ನನ್ನ ಸಕಲೇಶಪುರ ಕೂಡ ಇದುವರೆಗೂ ಪ್ರವಾಹಪೀಡಿತ ಮತ್ತು ಇತರೆ ಕಾಮಗಾರಿಗಳಿಗೆ ಯಾವುದೇ ಅನುದಾನ ನೀಡಿಲ್ಲ. ನಮ್ಮಲ್ಲಿ ಕಾಡಾನೆ ಸಮಸ್ಯೆ ಇದೆ, ಅದಕ್ಕೂ ಕೂಡ ಸ್ಪಂದಿಸಿಲ್ಲ.
ಬೆಳೆ ಪರಿಹಾರಕ್ಕೆ ಸ್ಪಂದಿಸದೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ನಮ್ಮ ಮೈತ್ರಿ ಸರ್ಕಾರದಲ್ಲಿ ಅನುಮೋದನೆಗೊಂಡಿದ್ದ ಕೆಲವು ಕಾಮಗಾರಿಗಳನ್ನು ಕೂಡ ತಡೆಹಿಡಿದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ, ನಾವು ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಜ. 25ಕ್ಕೆ ಗೃಹಕಚೇರಿ ಕೃಷ್ಣಾದಲ್ಲಿ ನಾವು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಭಾಗವಹಿಸಲಿದ್ದಾರೆ ಎಂದು ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.