ಹಾಸನ: ಒಂದು ವರ್ಷದ ಬಿಜೆಪಿ ಸರ್ಕಾರದ ಸಾಧನೆ ಎಂದರೆ ವರ್ಗಾವಣೆ ಒಂದೇ ಸಾಧನೆ.. ಕೋವಿಡ್ ವಿಚಾರವಾಗಿ ಕೂಡ ಸರಿಯಾಗಿ ನಿರ್ವಹಣೆ ಮಾಡದ ಸರ್ಕಾರ ಸಂಪೂರ್ಣ ವಿಫಲವಾಗಿ ದೇವರೆ ದಿಕ್ಕು ಎಂದು ಹೇಳುವ ಸ್ಥಿತಿಗೆ ಬಂದಿದೆ. ಇದೊಂದು ಅಸಹಾಯಕತೆಯ ಸರ್ಕಾರವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಮಾತಿನ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ನಟಿ ಸುಧಾರಾಣಿ ಅವರ ಅಕ್ಕನ ಮಗಳಿಗೆ ಸರಿಯಾದ ಚಿಕಿತ್ಸೆ ದೊರಕದಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದ ಅವರು, ಆಲೂರಿನ ರೋಗಿಯೋರ್ವ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ದಿನಕ್ಕೆ 40 ಸಾವಿರ ರೂ. ಬಿಲ್ ಹಾಕಿದ್ದಾರೆ. ಇದೇನಾ ಆಡಳಿತ ಎಂದು ಜರಿದರು.
ಚನ್ನರಾಯಪಟ್ಟಣದ ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯಾಂಶ ಹೊರ ತರಬೇಕು. ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಬಿಜೆಪಿ ಆಡಳಿತ ವಹಿಸಿಕೊಂಡ ನಂತರ ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಬಂದ ನಂತರ ಈ ಘಟನೆ ನಡೆದಿದೆ. ಸಚಿವ ಜೆ ಸಿ ಮಾಧುಸ್ವಾಮಿ ಇಲ್ಲಿ ಜಿಲ್ಲಾ ಮಂತ್ರಿಯಾಗಿ 10 ತಿಂಗಳಿದ್ರು. ಜನಪ್ರತಿನಿಧಿಗಳಿಗೆ ಸ್ಪಂದಿಸುತ್ತಿದ್ದರು. ಇತ್ತೀಚೆಗೆ ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ ಏನಾಗಿದೆ ಎಂದು ಪ್ರಶ್ನೆ ಮಾಡಿದರು.
ಕಳೆದ ಹಲವಾರು ತಿಂಗಳುಗಳಿಂದ ಆಹಾರ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ ಆಹಾರ ಘಟಕದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಎಲ್ಲಾದರೂ ಅಕ್ಕಿ ದಾಸ್ತಾನು ಅಕ್ರಮ ಕಂಡು ಬಂದರೆ ತಕ್ಷಣ ಕ್ರಮ ಜರುಗಿಸುತ್ತಿದ್ದರು ಎಂದು ಒಳ್ಳೆಯ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.