ಹಾಸನ (ಹಳೇಬೀಡು): ವಿದ್ಯುತ್ ಸಮಸ್ಯೆ ಉಂಟಾದ ಹಿನ್ನೆಲೆ, ಜೆಡಿಎಸ್ ಮುಖಂಡನೊಬ್ಬ ವಿದ್ಯುತ್ ಸ್ವೀಕರಣ ಕೇಂದ್ರದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಜಿಲ್ಲೆಯ ಹಳೇಬೀಡು ಹೋಬಳಿಯಲ್ಲಿ ನಡೆದಿದೆ.
ತಾಂತ್ರಿಕ ದೋಷದಿಂದಾಗಿ ಗುರುವಾರ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿತ್ತು. ಗ್ರಾಮದ ಜೆಡಿಎಸ್ ಮುಖಂಡ ರಾಮಚಂದ್ರ ಎಂಬುವವರು ವಿದ್ಯುತ್ ಸಮಸ್ಯೆ ಬಗ್ಗೆ ವಿದ್ಯುತ್ ನಿಗಮದ ಕಚೇರಿಗೆ ದೂರು ನೀಡುವ ಬದಲು ತಮ್ಮೂರಿನಲ್ಲಿರುವ ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ ಏಕಾಏಕಿ ಭೇಟಿ ನೀಡಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು.
ಗಂಗೂರಿನ ವಿದ್ಯುತ್ ಸ್ವೀಕರಣಾ ಕೇಂದ್ರದ ಸಿಬ್ಬಂದಿಯಾದ ಹೇಮಂತ್ ಎಂಬುವವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ರಾಮಚಂದ್ರ ಎಂಬುವವರ ವಿರುದ್ಧ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಹಳೇಬೀಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.