ಹಾಸನ: 1994ರಲ್ಲಿ ಇದ್ದ ಪರಿಸ್ಥಿತಿ ಮತ್ತೆ ಉಲ್ಬಣವಾಗುವ ಮೂಲಕ 2023 ಕ್ಕೆ ಜೆಡಿಎಸ್ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಂಬರ್ 1 ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಹೀಗಾಗಿ, ಅವರುಗಳಿಗೆ ತಳಮಳ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಒಂಬತ್ತು ತಿಂಗಳಷ್ಟೇ ಆಯಸ್ಸು.. ನಂತ್ರ ನಮ್ದೇ ಸರ್ಕಾರ: ಸಿ.ಎಂ. ಇಬ್ರಾಹಿಂ
ಈ ಬಾರಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ. ಪ್ರತಿ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವರನ್ನು ಸಮಾಧಾನ ಪಡಿಸುವ ಕಾರ್ಯ ನಡೆಯುತ್ತಿದ್ದು, ಇನ್ನು 10, 12 ಜಿಲ್ಲೆಗಳಲ್ಲಿ ಸಂಘಟನಾ ಕಾರ್ಯ ಬಾಕಿ ಇದೆ. ಅದನ್ನ ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಜೆಡಿಎಸ್ ಪಕ್ಷದ ಕೆಲವು ತಳಿಗಳನ್ನು ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ತಳಿ ಅಂತ ಬಿಂಬಿಸುತ್ತಿವೆ. ಈ ಪರಿಸ್ಥಿತಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಂದಿರುವುದು ನಮ್ಮ ಪಕ್ಷದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಶಕ್ತಿ ಕಳೆ ಬಂದಿದೆ. ಈ ನಿಟ್ಟಿನಲ್ಲಿ ಭಾರತ್ ಜೋಡೋ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಮೊದಲು ಪಕ್ಷದಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಒಂದುಗೂಡಿಸಿ ಗಟ್ಟಿಗೊಳಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: 'ದೇವೇಗೌಡರು ಈ ರಾಜ್ಯದ ಪಿತಾಮಹ, ಆರೂವರೆ ಕೋಟಿ ಜನರ ತಂದೆ': ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಚಾಮರಾಜಪೇಟೆಗೆ ಬಂದು ನಿಂತರೆ ಒಂದು ಕಡೆ ಮುಸ್ಲಿಮರು ಮತ್ತೊಂದು ಕಡೆ ಗೌಡ್ರು ಸೇರಿ ಚಾಪ್ಸ್ ಮಾಡಿ ಬಿಡುತ್ತಾರೆ ಅಂತ ವ್ಯಂಗ್ಯವಾಡಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ನನ್ನ ಒಳ್ಳೆಯ ಸ್ನೇಹಿತ. ಆದರೆ, ಸಿ ಟಿ ರವಿ ಆ ರೀತಿ ಮಾತನಾಡಬಾರದಾಗಿತ್ತು. ಕ್ಷಮೆ ಕೇಳಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಪ್ರವಾಹದಿಂದ ರಾಜ್ಯವೇ ತತ್ತರಿಸಿದೆ. ಇಂತಹ ಸಮಯದಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ ಡ್ಯಾನ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದು ಮುಂದಿನ ದಿನದಲ್ಲಿ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್-ಬಿಜೆಪಿಗೆ ಇಬ್ರಾಹಿಂ ಸವಾಲು