ಹಾಸನ: ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಮಠಮಾನ್ಯಗಳು, ಈ ನಾಡಿನ ತಾಯಂದಿರ ಆಶೀರ್ವಾದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ನಡೆದ ಸಪ್ತಮಾತೃಕಾ ದೇವೀರಮ್ಮ ದೇಗುಲ ಉದ್ಘಾಟನೆ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳ 28ನೇ ಪೀಠಾರೋಹಣ ಮತ್ತು ವರ್ಧಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಬಿಎಸ್ವೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರವಿತಂದ್ರೆ ಗ್ರಾಮ ಧಾರ್ಮಿಕ ಭಕ್ತಿ ಭಾವ ಕೇಂದ್ರ. ಇಂದಿನ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ತಾಯಂದಿರೇ ಸೇರಿದ್ದು, ಇಂದು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದ್ರೆ ಅದು ಈ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದದಿಂದ. ಸದ್ಯ ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಗುರುಗಳ ಆಶೀರ್ವಾದದಿಂದ ಇಂದಿನಿಂದ ಅಭಿವೃದ್ಧಿ ಪಥದ ಕಡೆ ಸಾಗಲಿದೆ ಎಂದರು.
ಇನ್ನು ನಮ್ಮ ನಾಡಿನಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ರಂಭಾಪುರಿ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಪ್ರವಾಸ ಮಾಡಿರುವಷ್ಟು ಬೇರೆ ಯಾವ ಮಠಾಧಿಪತಿಗಳು ಮಾಡಿಲ್ಲ. ಧರ್ಮ ಜಾಗೃತಿ ಮಾಡುತ್ತಿರುವವರಲ್ಲಿ ಜಗದ್ಗುರು ರಂಭಾಪುರಿ ಪೀಠಾಧಿಪತಿಗಳು ಮೊದಲಿಗರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ರೈತರ ಪರವಾಗಿ, ಮಹಿಳೆಯರ ಪರವಾಗಿ ಹಾಗೂ ಸಮಾಜದ ಒಳಿತನ್ನು ಕೇಂದ್ರೀಕರಿಸಿ ಈ ಬಾರಿಯ ಬಜೆಟ್ ಇರಲಿದೆ ಎಂದರು.
ದೇವಿತಂದ್ರೆ, ಹೇಮಾವತಿ ಬಲದಂಡೆ ನಾಲೆ ಪ್ರದೇಶಕ್ಕೆ ಒಳಪಡುವ ಮುಳುಗಡೆ ಗ್ರಾಮ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಸತಿ ನಿರ್ಮಾಣ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದರು.