ಹಾಸನ: ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ರಾಜ್ಯದ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ? ಹೆಚ್ಡಿಸಿಸಿ ಬ್ಯಾಂಕ್ನಲ್ಲಿ ರೈತರ ಹೆಸರಿನ ಮೇಲೆ ನಕಲಿ ಸಾಲ ಮಾಡಲಾಗಿರುವುದು ಸತ್ಯ. ಸತ್ಯ ಹೇಳಲು ಹೊರಟರೆ ಇವರಿಗೆ ಸಿಟ್ಟು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಬಿಜೆಪಿ ಕಚೇರಿಯಲ್ಲಿ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಟಿಕೆಟ್ ವಿಚಾರ ಪ್ರಸ್ತಾಪ ಮಾಡಿ, ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಏನು ನಡೀತಿದೆ ಇದಕ್ಕೆ ಕಾರಣ ಯಾರು ಗೊತ್ತಿಲ್ವಾ? ಹೆಚ್ಡಿಸಿಸಿ ಬ್ಯಾಂಕ್ನಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಮಾಡಲಾಗಿದೆ. ನಾನು ಈ ವಿಚಾರ ಕೆಡಿಪಿ ಸಭೆಯಲ್ಲಿ ಪ್ರಶ್ನೆ ಮಾಡಲು ಹೋದರೆ ಹೇಳಲು ಬಿಡಲಿಲ್ಲ. ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಮುಗಿಬಿದ್ದರು. ರೈತರ ಹೆಸರು ಹೇಳಿಕೊಂಡು ರೈತರ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ. ನಾನು 7 ಲಕ್ಷ ಹಣ ವಾಪಸ್ ಕಟ್ಟಿಸಿದ್ದೇನೆ. ಸಂಬಂಧಿಕರನ್ನು ಅರಕಲಗೂಡಿನಲ್ಲಿ ಬಿಟ್ಟು ನಾನೇ ಅಭ್ಯರ್ಥಿ ಅಂತ ಪ್ರಚಾರ ಮಾಡಿಸಿದರಲ್ಲ. ಇದು ಅವರಿಗೆ ಗೊತ್ತಿಲ್ಲದೇ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಯಾವ ವ್ಯವಸ್ಥೆ ಸರಿ ಇದೆ ಹೇಳಿ?: ಎ ಟಿ ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ವ್ಯವಸ್ಥೆ ಸರಿ ಇದೆ ಹೇಳಿ? ಇದೇ ಕಾರಣಕ್ಕೆ ದೆಹಲಿ ವರಿಷ್ಠರು ಕೂಡ, ವ್ಯವಸ್ಥೆ ಕೊಂಚ ಕೆಟ್ಟಿದೆ ಅದನ್ನು ಸರಿ ಮಾಡಿ ಅಂತಾನೂ ಹೇಳಿ ಕಳುಹಿಸಿದ್ದಾರೆ. ಹೀಗಾಗಿ ಇದನ್ನು ಸರಿ ಮಾಡಿಕೊಂಡು ಹೋಗೋ ಜವಾಬ್ದಾರಿ ಕೂಡ ಇದೆ ಎಂದರು. ಕಾಂಗ್ರೆಸ್ನಲ್ಲಿ ಏನೇನು ನಡೀತು ಅನ್ನೋದು ನನಗೆ ಗೊತ್ತಿದೆ. ಈಗ ಆ ಚರ್ಚೆ ಬೇಡ. ಸಮಯ ಬಂದಾಗ ಹೇಳ್ತೀನಿ ಎಂದು 2008 ರಿಂದಲೂ ಅವರು ಆಹ್ವಾನ ಕೊಡುತ್ತಲೇ ಬರುತ್ತಿದ್ದಾರೆ. ಆಗಿಂದಲೂ ನಾನು ಹೋಗಲು ನನ್ನ ಮನಸ್ಸು ಅಂಜಿತ್ತು. ಒಂದೊಂದು ಚುನಾವಣೆಗೆ ಒಂದೊಂದು ಪಕ್ಷ ಸೇರ್ಪಡೆ ನನ್ನ ಮನಸ್ಸಿಗೆ ಹಿಡಿಸಿರಲಿಲ್ಲ ಎಂದರು.
ಪುನೀತ್ ಕೆರೆಹಳ್ಳಿ ವಿವಾದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅದರ ಮೇಲೆ ಏನು ನಡೆದಿದೆ ಅದಕ್ಕೆ ಕ್ರಮ ಕೈಗೊಳ್ತಾರೆ. ಯಾರೋ ಇಬ್ಬರು ಮಾಡಿದ್ದನ್ನು ಬಿಜೆಪಿ ಮಾಡಿದೆ ಅಂತಿರಾ? ನೈತಿಕ ಪೊಲೀಸ್ ಗಿರಿ ಮಾಡೋದು ತಪ್ಪು. ಮುಸ್ಲಿಂ ಮೀಸಲಾತಿ ರದ್ದತಿ ವಿಚಾರವಾಗಿ ಮಾತನಾಡಿ, ಸದಾಶಿವ ಆಯೋಗ ಜಾರಿ ತಂದ ಮೇಲೆ ಈಗ ಸರಿ, ತಪ್ಪು ಅಂತ ಹೇಳ್ತಿಲ್ಲ. ಮುಸ್ಲಿಂ ಮೀಸಲಾತಿ ಆರ್ಥಿಕ ವಿಶೇಷ ಮೀಸಲಾತಿ ಮಾಡಿ 10 ಪರ್ಸೆಂಟ್ ಮಾಡಿದ್ದಾರೆ. ಎಲ್ಲ ಅದರಲ್ಲೇ ಸೇರಿಕೊಳ್ಳುತ್ತದೆ. ಬಲಿಜ, ಕೊರಮ ಇವರಿಗೆ ನಾಲ್ಕು ಪರ್ಸೆಂಟ್ ಮಾಡಿದ್ದಾರೆ. ಹಿಂದೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ನೋಡಿ. ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಅರಕಲಗೂಡಿನಲ್ಲಿ ಕೆಲ ಕಾರ್ಯಕರ್ತರು ಸುಮ್ಮನೆ ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದರು.
ಇದನ್ನೂ ಓದಿ: ನಾನೂ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಆದ್ರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಾಫ್ಟ್ ಆದ ಮಹೇಶ್ ಕುಮಟಳ್ಳಿ