ಹಾಸನ: ಹಾರಂಗಿ ಎಡದಂಡೆ ನಾಲೆಯ ಕೊಲ್ಲಿಯನ್ನು ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಅತಿಕ್ರಮವಾಗಿ ಒತ್ತುವರಿಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಾಜಿ ಸಚಿವ ಎ.ಮಂಜು ಭೇಟಿ ನೀಡಿ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಣನೂರು-ರಾಮನಾಥಪುರ ಸಂಪರ್ಕ ಕಲ್ಪಿಸುವ ಕೂಡಲೂರು ಗೇಟ್-ವಡುವಿನ ಹೊಸಹಳ್ಳಿ ನಡುವೆ ಬರುವ ಹಾರಂಗಿ, ನೀರಾವರಿ ಇಲಾಖೆಗೆ ಸೇರಿದ ಎಡದಂಡೆ ನಾಲೆಯ ಸುಮಾರು 400 ಮೀಟರ್ ಉದ್ದದ 30 ಅಡಿ ಅಗಲದ ಕೊಲ್ಲಿಯನ್ನು ಮಣ್ಣಿನಿಂದ ಮುಚ್ಚಿ ಅತಿಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವುದಕ್ಕೆ ಪಕ್ಕದ ಜಮೀನಿನ ಮಾಲೀಕನೋರ್ವ ಯತ್ನಿಸಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಟಿದ ಮಾಜಿ ಸಚಿವ ಎ.ಮಂಜು, ದಿನನಿತ್ಯ ಜನಸಾಮಾನ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಿರುಗಾಡುವ ರಸ್ತೆಯ ಸಮೀಪದಲ್ಲೇ ಅತಿಕ್ರಮವಾಗಿ ಕೊಲ್ಲಿಯನ್ನು ಒತ್ತುವರಿ ಮಾಡಿಕೊಳ್ಳುವ ಕೆಲಸ ಮಾಡುತ್ತಿರುವವರ ಮೇಲೆ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕೊಣನೂರು ಮತ್ತು ರಾಮನಾಥಪುರ ಸಂಪರ್ಕದ ರಸ್ತೆಯ ಮಧ್ಯೆ ಸೇತುವೆಯ ಮೂಲಕ ಕಾವೇರಿ ನದಿಯ ಹೆಚ್ಚುವರಿ ನೀರು ಹರಿಯುವುದಕ್ಕೆಂದು ಕೊಲ್ಲಿಯನ್ನು ನಿರ್ಮಿಸಲಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಈ ರಸ್ತೆ ಸಂಪೂರ್ಣ ಜಲಾವೃತವಾಗುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಸಹ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಡ್ರೈನೇಜ್ ತೆಗೆದು ಕಲ್ಲು ಕಟ್ಟಿ ನೀರು ಹರಿಯುವ ಹಾಗೆ ಕೊಲ್ಲಿಯ ಕಾಮಗಾರಿಗೆಂದು ಸರ್ಕಾರದಿಂದ ಅನುದಾನ ಬಿಡುಗಡೆಗೊಂಡು ಕಾಮಗಾರಿಯನ್ನು ಸಹ ಮಾಡಲಾಗಿತ್ತು.