ಹಾಸನ: ಬಿಜೆಪಿ ಹಾಗೂ ಕಾಂಗ್ರೆಸ್ ಹಾಸನ ಜಿಲ್ಲೆಗೆ ಕಂಟಕಪ್ರಾಯರು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕಳೆದ ಹತ್ತು ವರ್ಷಗಳಿಂದ ನಮ್ಮ ಸರ್ಕಾರದ ಕೆಲಸಗಳನ್ನು ತಡೆಹಿಡಿಯುವ ಮೂಲಕ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾಳೆ ಹಾಸನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕೋವಿಡ್ 19ರ ತಡೆಗಟ್ಟುವಿಕೆ ವಿಚಾರವಾಗಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹಾಸನ ಜಿಲ್ಲೆಗೆ ಎರಡು ರಾಷ್ಟ್ರೀಯ ಪಕ್ಷಗಳು ಮಾಡಿರುವ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ಮುಖ್ಯಮಂತ್ರಿಗಳ ಎದುರಿಗೆ ಬಿಚ್ಚಿಡುತ್ತೇನೆ ಎಂದು ಖಾರವಾಗಿ ನುಡಿದರು.
ಇದೇ ಅವರ ದೊಡ್ಡ ಸಾಧನೆ: ಹಾಸನ ವಿಮಾನ ನಿಲ್ದಾಣಕ್ಕೆ 1962 ರಲ್ಲಿ ದೇವೇಗೌಡರು ಅಡಿಗಲ್ಲು ಇಟ್ಟರು. ಆದರೆ ಕೆಲವು ಕಾರಣಾಂತರಗಳಿಂದ ಅದು ನೆನೆಗುದಿಗೆ ಬಿದ್ದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇದಕ್ಕೆ ತಡೆಯೊಡ್ಡಿ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸಿದರು. ಯಡಿಯೂರಪ್ಪ ಇಂತಹ ಕೆಲಸ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇದೇ ಅವರ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡಿ ಅನ್ಯಾಯ ಎಸಗಿದ್ದಾರೆ: ಹಾಸನಕ್ಕೆ ನೀಡಿದ್ದ ಕೆಲವು ಕಾಮಗಾರಿಗಳನ್ನು ತಡೆ ಮಾಡಿ ಅದನ್ನ ಶಿಕಾರಿಪುರ ಮತ್ತು ಹರಿಹರಕ್ಕೆ ನೀಡಿದ್ದಾರೆ. ಜಿಲ್ಲೆಯ ಚನ್ನಪಟ್ಟಣ ಕೆರೆಯ ಅಭಿವೃದ್ಧಿ, ಹಾಸನ ಹೊಸ ಬಸ್ ನಿಲ್ದಾಣದ ರೈಲ್ವೆ ಮೇಲ್ಸೇತುವೆ, ಹಾಸನ ದುದ್ದ ರೈಲ್ವೆ ಮಾರ್ಗ, ಬೇಲೂರು ಬಿಳಿಕೆರೆ ರಸ್ತೆ, ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡಿ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದಂತೆ: ಮಾಧ್ಯಮದವರಿಗೆ ಮುಖ್ಯಮಂತ್ರಿಗಳ ಸಭೆಗೆ ಆಹ್ವಾನ ಇಲ್ಲ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾಳೆ ನಿಮ್ಮನ್ನ ಸಭೆಗೆ ಆಹ್ವಾನ ಮಾಡದಿದ್ದರೆ ನಾವುಗಳೆಲ್ಲರೂ ಸ್ವಯಂಪ್ರೇರಿತವಾಗಿ ಸಭೆಯಿಂದ ಎದ್ದು ಪ್ರತಿಭಟನೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಹಾಗೇನಾದರೂ ಮಾಧ್ಯಮದವರನ್ನು ಸಭೆಗೆ ನಿಷೇಧ ಮಾಡಿದರೆ, ಅದು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದಂತೆ. ಹಾಗಾಗಿ ನಾಳೆ ಈ ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳ ಮುಂದೆ ಬಿಚ್ಚಿಡಲಿದ್ದೇನೆ. ನೀವು ಇರಬೇಕು. ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಓದಿ: ನರಹಂತಕ ಕಾಡಾನೆ ಸೆರೆ.. 5 ಸಾಕಾನೆ, 120 ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ