ಹಾಸನ: ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಜವಾಬ್ದಾರಿ ತೆಗೆದುಕೊಂಡಿದ್ದು, ದೇಶದ ಎಲ್ಲಾ ಜಾತ್ಯಾತೀತ ಪಕ್ಷಗಳನ್ನ ಒಗ್ಗೂಡಿಸಿಕೊಂಡು ಹೋಗಲು ಯತ್ನಿಸುತ್ತಿದ್ದಾರೆ. ಹಾಗೇನಾದ್ರು ಅವರು ನಮ್ಮನ್ನ ಕರೆದ್ರೆ ನಾನು ಸ್ಪಂದಿಸುತ್ತೇನೆ ಎಂದು ನಾನು ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದೆ ಅಷ್ಟೆ. ಆದ್ರೆ ನಾನು ಯಾರನ್ನೂ ನಿಂದನೆ ಮಾಡಿಲ್ಲ ಎಂದು ಸಿದ್ದರಾಮಯ್ಯನವರ ಮಾತಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರತ್ಯುತ್ತರ ನೀಡಿದ್ದಾರೆ.
ಶ್ರಾವಣ ಮಾಸದ ಕೊನೆಯ ಶನಿವಾರವಾದ ಇಂದು ಮನೆದೇವರಾದ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ನಾನು ಸೋತೆ ಎಂದು ಧೃತಿಗೆಟ್ಟಿಲ್ಲ. ಕಳೆದ 15 ದಿನಗಳಿಂದ ಪಕ್ಷದ ಕಚೇರಿಯಲ್ಲಿ ಇದ್ದು ಬಲವರ್ಧನೆ ಬಗ್ಗೆ ಸಭೆ ಮಾಡ್ತಿದ್ದೇನೆ. ಶ್ರೀಮಾನ್ ವಿಶ್ವನಾಥ್ ಕಾರಣಾಂತರದಿಂದ ನಮ್ಮನ್ನ ಬಿಟ್ಟು ಹೋದ್ರು. ನಮ್ಮ ಜಿಲ್ಲೆಯವರೇ ಆದ ಹೆಚ್.ಕೆ.ಕುಮಾರಸ್ವಾಮಿ 6 ಬಾರಿ ಶಾಸಕರಾಗಿದ್ದರು. ಅವರನ್ನ ಮಂತ್ರಿ ಮಾಡಲು ಆಗಿರಲಿಲ್ಲ, ಹಾಗಾಗಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರ ನಾಯಕತ್ವದಲ್ಲಿ ಹೋಗುತ್ತಿದ್ದೇವೆ.
ಈ ಸರ್ಕಾರ ಮೂರು ವರ್ಷ 8 ತಿಂಗಳು ನಡೆಯಬಹುದು. ಸರ್ಕಾರಕ್ಕೆ ನಾವು ಯಾರು ತೊಂದರೆ ಮಾಡಲ್ಲ. ಜನರಿಗೆ ಒಳ್ಳೆಯ ಕೆಲಸ ಮಾಡಲಿ, ಮಾಡದಿದ್ದರೆ ಹೋರಾಟ ಮಾಡ್ತೀವಿ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದಿಂದ ಸಮರ್ಥವಾಗಿ ಹಣ ಬಿಡುಗಡೆ ಮಾಡಿಸಲು ಶಕ್ತರಾಗಿದ್ದಾರೆ ಎನ್ನೋ ನಂಬಿಕೆ ಇದೆ. ಇದು ಆಗಲಿಲ್ಲ ಅಂದ್ರೆ ಹೋರಾಟ ಮಾಡಬೇಕಾಗುತ್ತೆ. ಪ್ರಾದೇಶಿಕ ಪಕ್ಷದ ಸದಸ್ಯನಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದ್ರು.
ಸದ್ಯ ನಾನು ರಾಜ್ಯ ರಾಜಕಾರಣದಿಂದ ದೂರ ಇದ್ದೇನೆ. ರಾಷ್ಟ ರಾಜಕಾರಣ ಮಾಡಲು ಹಲವಾರು ಜನ ಕರೆದಿದ್ದಾರೆ, ಆದ್ರೆ ಹೋಗಿಲ್ಲ. ಕಾಶ್ಮೀರಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಂದು ನಿಯೋಗ ಹೋಗಿದೆ. ಅವರೊಂದಿಗೆ ಕುಪೇಂದ್ರ ರೆಡ್ಡಿಯನ್ನು ಕಳುಹಿಸಿದ್ದೇನೆ. ಸದ್ಯ ರಾಷ್ಟ್ರ ರಾಜಕಾರಣದಲ್ಲಿ ತೊಡಗಿ ಕೊಳ್ಳೋಕೆ ನನಗೆ ಸಮಯ ಇಲ್ಲ. ನನಗೆ 87 ವರ್ಷ ಆಗಿದೆ, ಮೊದಲಿನ ಹಾಗೇ ಕೆಲಸ ಮಾಡಲು ನನಗೆ ಆಗಲ್ಲ ಎಂದು ಮೂರು ವರ್ಷ ಮೊದಲೇ ಹೇಳಿದ್ದೆ. ಅಲ್ಲದೇ ಕಳೆದ ಲೋಕಸಭೆ ಕಡೆ ದಿನವೂ ಸಂಸತ್ತಿನಲ್ಲಿ ಹೇಳಿದ್ದೆ. ಬಳಿಕ ಏನೇನಾಯ್ತು ಎಂದು ಗೊತ್ತಿದೆಯಲ್ಲಾ ಎಂದು ನಕ್ಕರು.
ಮಂಡ್ಯದಲ್ಲಿ ಮೊಮ್ಮಗ ನಿಖಿಲ್ ಸೋತಿದ್ದಾರೆ, ನಾನೂ ಸೋತಿದ್ದೇನೆ. ಆದ್ರೆ ಸುಮ್ಮನೇ ಕೂರ್ತೀವಾ. ಜನತೆ ಏನು ತೀರ್ಮಾನ ಕೊಡ್ತಾರೊ ಅದರಂತೆ ಹೋಗ್ತೀವಿ. ಸಿದ್ದರಾಮಯ್ಯ ಹೇಳೋದೆಲ್ಲಾ ಜನರಿಗೆ ಗೊತ್ತಿಲ್ಲವೇ. ಸರ್ಕಾರ ಬಿದ್ದ ಮರುದಿನ ಜನ ಏನು ಮಾತನಾಡಿದ್ರು ಗೊತ್ತಿಲ್ಲವೇ..? ನಾನು ದೈವವನ್ನ ನಂಬಿರೋನು, ಅದರಂತೆ ಮುಂದುವರೆಯುತ್ತೇನೆ. ದೇವೇಗೌಡರನ್ನ ಮುಗಿಸೋರೆಲ್ಲಾ ಏನಾಗಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯಗೆ ದೇವೇಗೌಡ ತಿರುಗೇಟು ನೀಡಿದ್ರು.