ಹಾಸನ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನೆಗೆ ಬಂದಾಗ ನಾನು ಯಾವುದೇ ಫೈಲಿಗೆ ಸಹಿ ಮಾಡಿಸಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿ ಮನೆಗೆ ಬಂದಾಗ ಗೌರವ ಕೊಡಬೇಕು. ಆ ಕೆಲಸವನ್ನು ಮಾತ್ರ ಮಾಡಿದ್ದೇನೆ ಅದನ್ನ ಬಿಟ್ಟು ಬೇರೆ ಯಾವುದೇ ಕಡತಕ್ಕೆ ಸಹಿ ಹಾಕಿಕೊಂಡಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸ್ಪಷ್ಟನೆ ನೀಡಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ಸಿಎಂ ಮುಖ್ಯಮಂತ್ರಿಗಳ ಭೇಟಿಯ ವಿಚಾರಕ್ಕೆ ಪ್ರತಿಕ್ರಿಯಿಸಿ ಒಬ್ಬ ಮುಖ್ಯಮಂತ್ರಿ ಮಾಜಿ ಪ್ರಧಾನಿ ಮನೆಗೆ ಬಂದಾಗ ಅವರನ್ನು ಗೌರವಯುತವಾಗಿ ಕಾಣುವುದು ನಮ್ಮ ಕರ್ತವ್ಯ. ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ಆದ್ರೆ ಇಂತಹ ಸಂದರ್ಭದಲ್ಲಿ ನಾನೇನು ಮುಖ್ಯಮಂತ್ರಿಗಳ ಬಳಿ ಬೇರೆ ಅರ್ಜಿ ಇಟ್ಟುಕೊಂಡು ಹೋಗಿರಲಿಲ್ಲ.
ಹಿಂದಿನ ಸರ್ಕಾರ ಹಾಸನ ಜಿಲ್ಲೆಗೆ ದ್ವೇಷದ ರಾಜಕಾರಣ ಮಾಡುವ ಮೂಲಕ ಅನುದಾನವನ್ನು ಕಡಿತಗೊಳಿಸಿದ್ದು, ಅದೇ ರೀತಿ ರಾಜಕೀಯ ದ್ವೇಷ ಮಾಡದೇ ಒಳ್ಳೆ ಕೆಲಸ ಮಾಡಿ, ಸಹಕಾರ ಕೊಡಿ ಎಂದು ನೂತನ ಸಿಎಂಗೆ ನಾನು ಮನವಿ ಮಾಡಿದ್ದೇನೆ ಅಂತ ಹೇಳಿದರು. ರಾಜಕೀಯ ದ್ವೇಷ ಸಾಧಿಸದೇ ಒಳ್ಳೆಯ ಕೆಲಸ ಮಾಡಿದರೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಯಡಿಯೂರಪ್ಪ ರೀತಿ ರಾಜಕೀಯ ದ್ವೇಷ ಮಾಡಬೇಡಿ:
ಮಳೆ ಹೆಚ್ಚಾಗಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಮಂಗಳೂರು - ಬೆಂಗಳೂರು ನಡುವಿನ ಶಿರಾಡಿ ಘಾಟ್ ರಸ್ತೆ ಬಂದ್ ಆಗಿದ್ದು, ಮಳೆಯಿಂದ ಈಗಾಗಲೇ ಮಲೆನಾಡು ಭಾಗದಲ್ಲಿ ಸಾಕಷ್ಟು ಮನೆಗಳು ಕುಸಿದಿವೆ. ಹಾಸನ ಮಾತ್ರವಲ್ಲ, ಇಡೀ ರಾಜ್ಯದ ಜನರ ನೆರವಿಗೆ ಧಾವಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಒಳ್ಳೆಯ ಕೆಲಸ ಮಾಡಿ, ಯಡಿಯೂರಪ್ಪ ಅವರ ರೀತಿ ರಾಜಕೀಯ ದ್ವೇಷ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು.
ದೇವೇಗೌಡರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ:
ದೇವೇಗೌಡರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ. ಬೊಮ್ಮಾಯಿ ನನ್ನ ಜೊತೆ ಆತ್ಮೀಯರಾಗಿದ್ದಾರೆ. ಒಳ್ಳೆಯ ಕೆಲಸ ಮಾಡು, ಯುವಕ ಇದ್ದೀಯಾ ಸಣ್ಣ-ಪುಟ್ಟ ಕೆಲಸ ಇದ್ದರೆ ಮಾಡಿಕೊಡು ಎಂದು ದೇವೇಗೌಡರು ಹೇಳಿದ್ದಾರೆ.
ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ಘೋಷಿಸಿ:
ಕಳೆದ ಇಪ್ಪತ್ತು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮನೆಗಳು ಕುಸಿದಿವೆ. ಕೆಲವೆಡೆ ರಸ್ತೆಗಳು ಕೊಚ್ಚಿ ಹೋಗಿವೆ ಇನ್ನು ಕೆರೆ ಕಟ್ಟೆಗಳಿಗೂ ಹಾನಿಯಾಗಿದೆ. ಹೆಚ್ಚು ಹಾನಿಯಾಗಿರುವ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಬೇಕು. ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಸಂತೋಷ್ ಅವರ ಮುಖವನ್ನೇ ನೋಡಿಲ್ಲ:
ಆರ್ಎಸ್ಎಸ್ ಮುಖಂಡ ಬಿ.ಎಲ್. ಸಂತೋಷ್ ಭೇಟಿ ವಿಚಾರವಾಗಿ ಮಾತನಾಡುತ್ತಾ, ಸಂತೋಷ್ ಅವರ ಮುಖವನ್ನೇ ನೋಡಿಲ್ಲ. ಅವರು ರಾಷ್ಟ್ರಮಟ್ಟದ ನಾಯಕರು. ನಾನು ಅವರನ್ನು ಭೇಟಿಯಾಗಿಲ್ಲ. ನನಗೆ ಅವರ ಬಗ್ಗೆ ಗೌರವವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂರನೇ ಅಲೆ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು:
ಕೊರೊನಾ ಮೂರನೇ ಅಲೆ ಶರವೇಗದಲ್ಲಿ ಹರಡುತ್ತಿದ್ದು, ಕೇರಳದಲ್ಲಿ ಪ್ರತಿದಿನ 20 ಸಾವಿರ ಪ್ರಕರಣ ಪತ್ತೆಯಾಗುತ್ತಿದೆ. ಕೂಡಲೇ ಹಾಸನ ಜಿಲ್ಲಾಧಿಕಾರಿಗಳು ಸಭೆ ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮೂರನೇ ಅಲೆ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಅದರಲ್ಲೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಎರಡನೇ ಅಲೆಯ ರೀತಿ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಸಿದರು.