ಹಾಸನ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಹೇಮಾವತಿ (28) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಈ ಸಾವಿಗೆ ಆಕೆಯ ಪತಿ ಗುರುರಾಜ್ ಕಾರಣ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಗುರುರಾಜ್ಗೆ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು.
ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾವಿಯಲ್ಲಿ ಯುವತಿ ಶವ ಪತ್ತೆ: ಮತ್ತೊಂದೆಡೆ, ಯುವತಿಯೊಬ್ಬಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಹಳ್ಳೂರ ಗ್ರಾಮದ ಮಂಜುಳಾ ಚನ್ನಪ್ಪಗೌಡ ಪಾಟೀಲ(22) ಎಂದು ಗುರುತಿಸಲಾಗಿದೆ. ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದ ಒಂಟಿ ಮಹಿಳೆ ಕೊಲೆ ಪ್ರಕರಣ: ಮನೆಯ ಕಾರು ಚಾಲಕ ಸೇರಿ 7 ಆರೋಪಿಗಳ ಬಂಧನ
ಪತ್ನಿಗೆ ಟಾರ್ಚರ್ ಕೊಡುತ್ತಿದ್ದ ಆರೋಪದಡಿ ಪತಿ ಅರೆಸ್ಟ್: ಡ್ರಗ್ಸ್ ನಶೆಯಲ್ಲಿ ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ಪತಿ ಸೇರಿ ಬಾಮೈದುನ ಇಬ್ಬರನ್ನು ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಪತಿ ಅಖಿಲೇಶ್ ಹಾಗೂ ಸಹೋದರ ಅಭಿಲಾಷ್ ನನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಅಖಿಲೇಶ್ ಸ್ನೇಹಿತರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
ಆಂಧ್ರದ ಕಾಕಿನಾಡ ಮೂಲದ ಅಖಿಲೇಶ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಪತಿಯ ಸಹೋದರ ಅಭಿಲಾಶ್ ಸಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮ್ಯಾಟ್ರಿಮೋನಿ ಜಾಲತಾಣದಲ್ಲಿ ವಧುವಿಗಾಗಿ ಶೋಧ ನಡೆಸುವಾಗ ಮಹಿಳೆ ಪರಿಚಯವಾಗಿ ನಂತರ ಪ್ರೀತಿಗೆ ತಿರುಗಿತ್ತು. ಪೋಷಕರಿಗೆ ವಿಷಯ ತಿಳಿಸಿ 2019ರಲ್ಲಿ ಜಯನಗರದಲ್ಲಿ ವಿವಾಹ ಮಾಡಿಕೊಂಡು ಹೆಚ್ಎಸ್ಆರ್ ಲೇಔಟ್ನಲ್ಲಿ ದಂಪತಿ ವಾಸವಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು.
ಮದ್ಯಪಾನ ಹಾಗೂ ಡ್ರಗ್ಸ್ ಚಟಕ್ಕೆ ದಾಸನಾಗಿದ್ದ ಅಖಿಲೇಶ್ ಕಾಲಕ್ರಮೇಣ ಮನೆಗೆ ಮಾದಕ ವಸ್ತು ತಂದು ಸೇವನೆ ಮಾಡುತ್ತಿದ್ದರು. ನಶೆಯಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಕೆಲ ದಿನಗಳ ಬಳಿಕ ಸ್ನೇಹಿತರನ್ನ ಮನೆಗೆ ಕರೆತಂದು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು. ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದರು. ಮಾದಕ ಗುಂಗಿನಲ್ಲಿ ಅವರ ಸ್ನೇಹಿತರು ನನ್ನ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತನೆ ತೋರುತ್ತಿದ್ದರೂ ಪತಿ ಏನೂ ಮಾತನಾಡದೆ ಸಹಕರಿಸುವಂತೆ ಹೇಳುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.