ಹಾಸನ: ಒಂದೂರಿಂದ ಮತ್ತೊಂದೂರಿಗೆ ವರ್ಗಾವಣೆ ಆದರೆ ನಾವು ಮನೆ ಬದಲಾಯಿಸುತ್ತೇವೆ. ಈ ವೇಳೆ ಮನೆಯಲ್ಲಿರುವ ವಸ್ತುಗಳನ್ನು ಮಾತ್ರ ಅಲ್ಲಿಂದ ಕೊಂಡೊಯ್ಯುತ್ತೇವೆ. ಆದರೆ ಈ ಕುಟುಂಬ ಮಾತ್ರ ಮನೆಯಲ್ಲಿರುವ ವಸ್ತುಗಳೊಂದಿಗೆ ಇಡೀ ಮನೆಯನ್ನೇ ಮತ್ತೊಂದೆಡೆಗೆ ಸಾಗಿಸಲು ಮುಂದಾಗಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮದ ಸುರೇಶ್ ಎಂಬುವರು 2004ರಲ್ಲಿ ಹೊಸ ಮನೆ ಕಟ್ಟಿದ್ದರು. ಈ ಮನೆ ಕಟ್ಟಿ ಸುಮಾರು 16 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಈ ಮನೆಯಿಂದ ಸುರೇಶ್ ಕುಟುಂಬಕ್ಕೆ ಆದ ಲಾಭ ಅಷ್ಟಿಷ್ಟಲ್ಲ. ಮನೆಯಲ್ಲಿ ಮೂರ್ನಾಲ್ಕು ಮದುವೆ ಶುಭ ಸಮಾರಂಭಗಳು ನಡೆದಿವೆ. ಅಷ್ಟೇ ಅಲ್ಲದೆ ಮನೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದು, ಒಂದೊಂದು ಕೊಠಡಿಗಳಲ್ಲಿ ಕುಟುಂಬದ ಒಬ್ಬೊಬ್ಬರ ಹತ್ತಾರು ಕನಸುಗಳಿವೆ. ಹಾಗಾಗಿ ಈ ಮನೆ ಎಂದರೆ ಕುಟುಂಬದ ಎಲ್ಲರಿಗೂ ಅಚ್ಚುಮೆಚ್ಚು.
ಇಂತಹ ಮನೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುತ್ತಿರುವುದರಿಂದ ನೆಲಸಮಗೊಳಿಸಲು ಹೆದ್ದಾರಿ ಇಲಾಖೆ ಮುಂದಾಗಿದೆ. ಈ ವೇಳೆ ನೋವಿನಿಂದಲೇ ಮನೆಯನ್ನು ಬಿಟ್ಟು ಕೊಟ್ಟ ಸುರೇಶ್ ಕುಟುಂಬ, ಪರ್ಯಾಯವಾಗಿ ಪರಿಹಾರ ಪಡೆಯುತ್ತದೆ. ಹೀಗೆ ಮನೆ ಬಿಟ್ಟು ಕೊಟ್ಟು ಪರಿಹಾರ ಪಡೆದರೂ ಸುರೇಶ್ ಕುಟುಂಬಕ್ಕೆ ಆ ಮನೆಯನ್ನು ಕಳೆದುಕೊಳ್ಳಲು ಇಷ್ಟವಿಲ್ಲರಲಿಲ್ಲ. ಹೀಗಾಗಿ ಎಲ್ಲೋ ಓದಿದ ಮತ್ತು ಮಾಧ್ಯಮಗಳಲ್ಲಿ ನೋಡಿದ ಸುದ್ದಿ ನೆನಪಿಗೆ ಬಂದು ಇಡೀ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಟಿಡಿಬಿಟಿ ಕಂಪನಿಯನ್ನು ಸಂಪರ್ಕಿಸುತ್ತಾರೆ. ಕಂಪನಿಯವರು ಸುರೇಶ್ ಕುಟುಂಬದೊಂದಿಗೆ ಕಳೆದ ಜನವರಿ ತಿಂಗಳಲ್ಲಿ ಒಪ್ಪಂದ ಮಾಡಿಕೊಂಡು ಮನೆ ಸ್ಥಳಾಂತರ ಕಾರ್ಯ ನಡೆದಿದೆ.
ಸದ್ಯ ಮನೆ ಇದ್ದ ಸ್ಥಳದಿಂದ ಸುಮಾರು 120 ಅಡಿ ದೂರ ಸ್ಥಳಾಂತರ ಮಾಡಲಾಗಿದ್ದು, ಇನ್ನು ಕೇವಲ ಐದು ಅಡಿ ಬಾಕಿ ಇದೆ. ಕೊರೊನಾ ಲಾಕ್ಡೌನ್ನಿಂದಾಗಿ ಸ್ಥಳಾಂತರ ಕಾರ್ಯ ವಿಳಂಬವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣವಾಗಿ ಮನೆ ಸ್ಥಳಾಂತರವಾಗಲಿದೆ. ಮನೆ ಸ್ಥಳಾಂತರ ಕಾರ್ಯಕ್ಕೆ ಸುರೇಶ್ ಕುಟುಂಬ 30 ಲಕ್ಷ ರೂ. ಖರ್ಚು ಮಾಡುತ್ತಿದೆ.
ಮನೆ ಸ್ಥಳಾತರ ಕಾರ್ಯ ಮಾಡುತ್ತಿರುವ ಟಿಡಿಬಿಟಿ ಕಂಪನಿ 2011ರಲ್ಲಿ ಬೆಂಗಳೂರಿನ ದೇವಾಲಯ ಮತ್ತು ಮಂಡ್ಯದಲ್ಲಿ ಒಂದು ಮನೆಯನ್ನು ಸ್ಥಳಾಂತರ ಮಾಡಿ ಯಶಸ್ವಿಯಾಗಿದೆ.