ಹಾಸನ: ಜಿಲ್ಲೆಯಲ್ಲಿ ನೆರೆ ಪೀಡಿತ ತಾಲೂಕುಗಳೆಂದು ಘೋಷಿಸಲ್ಪಟ್ಟಿರುವ ಸಕಲೇಶಪುರ - ಆಲೂರು ಹಾಗೂ ಬೇಲೂರು ತಾಲೂಕಿಗೆ ಹಿಮ್ಸ್ ಸಂಸ್ಥೆಯಿಂದ ತಲಾ 5 ಲಕ್ಷಗಳಂತೆ 15 ಲಕ್ಷ ರೂ.ಗಳನ್ನು ಸಂತ್ರಸ್ತರ ನಿಧಿಗೆ ನೀಡಲಾಯಿತು.
ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು, ಬೋಧಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಿಧಿಯಲ್ಲಿ ಲಭ್ಯವಿರುವ ಮೊತ್ತದ ಪೈಕಿ, ಪ್ರತಿ ನೆರೆಪೀಡಿತ ತಾಲೂಕುಗಳಿಗೆ ತಲಾ 5 ಲಕ್ಷ ರೂ.ಗಳಂತೆ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸುವಂತೆ ಸರ್ಕಾರ ಆದೇಶ ನೀಡಿದೆ. ಹಾಗಾಗಿ, ಹಿಮ್ಸ್ ಸಂಸ್ಥೆಯ ನಿರ್ದೇಶಕ ಡಾ. ಬಿ. ಸಿ ರವಿಕುಮಾರ್ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, 15 ಲಕ್ಷ ರೂ.ಗಳನ್ನು ಸಂತ್ರಸ್ತರ ನಿಧಿಗೆ ನೀಡಿದರು.
ನೆರೆಹಾವಳಿ ಪ್ರದೇಶದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೇ ಸಂಸ್ಥೆಯಿಂದ ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ಔಷಧ ಮಾತ್ರೆಗಳನ್ನು ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇನ್ನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನದಿಂದ ಒಂದು ದಿನದ ವೇತನವನ್ನು ಕಟ್ ಮಾಡಿ ನೆರೆ ಹಾವಳಿಗೆ ತುತ್ತಾಗಿರುವ ಸಂತ್ರಸ್ತರ ನಿಧಿಗೆ ಸುಮಾರು 15 ಲಕ್ಷ ರೂ. ಪಾವತಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಡಾ. ಬಿ.ಸಿ ರವಿಕುಮಾರ್ ತಿಳಿಸಿದರು.