ಹಾಸನ: ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಬಿಡಲಾಗುತ್ತಿತ್ತು. ನಿನ್ನೆ ಒಳಹರಿವಿನ ಪ್ರಮಾಣ ಕಡಿಮೆಯಾದ್ದರಿಂದ ಇಂದು ಹೇಮಾವತಿ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ಮುಚ್ಚಲಾಗಿದೆ.
ಸಾಲು-ಸಾಲು ರಜೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಳೆಯ ನಡುವೆಯೂ ಕೂಡ ಹೇಮಾವತಿ ಜಲಾಶಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವತ್ತು ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ಕಾರಣ ವಿವಿಧ ಭಾಗಗಳಿಂದ ಪ್ರವಾಸಿಗರು ಬಂದಿದ್ದರು. ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ಮುಚ್ಚಲಾಗಿತ್ತು. ಇದರಿಂದ ಪ್ರವಾಸಿಗರು ಬೇಸರದಿಂದ ವಾಪಸಾಗಿದ್ದಾರೆ.
ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಮಾತ್ರ ನೀರನ್ನು ಹರಿಬಿಡಲಾಗಿತ್ತು. ಹಾಗಾಗಿ ಹೇಮಾವತಿ ಜಲಾಶಯವನ್ನು ನೋಡಲು ಬಂದ ಸ್ಥಳೀಯ ಪ್ರವಾಸಿಗರು, ವಾಟೆಹೊಳೆಯತ್ತ ಮುಖ ಮಾಡಿದರು. 3 ಕ್ರಸ್ಟ್ ಗೇಟ್ಗಳನ್ನ ಹೊಂದಿರುವ ವಾಟೆಹೊಳೆ 8 ವರ್ಷಗಳ ಬಳಿಕ ತುಂಬಿದ್ದು, ಜಲಾಶಯದಿಂದ 1,500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.