ಹಾಸನ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹೇಮಾವತಿ ನದಿ ಮೈದುಂಬಿಕೊಂಡಿದೆ. ನಗರದ ಸಕಲೇಶಪುರ ಅಜಾದ್ ರಸ್ತೆ ಮತ್ತು ಅಂಗಡಿಗಳು ಜಲಾವೃತಗೊಂಡಿವೆ.
ಇಲ್ಲಿನ ಸಕಲೇಶಪುರ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಅಲ್ಲಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದ್ದು, 3 ಜೆಸಿಬಿಗಳಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಂಚಾರಕ್ಕೆ ಮುಕ್ತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ತಾಲೂಕು ಆಡಳಿತ ಕಾರ್ಯಪ್ರವೃತ್ತವಾಗಿವೆ. ಜಿಲ್ಲೆಯ 6 ತಾಲೂಕಿನಲ್ಲಿ ಅಂದರೆ ಸಕಲೇಶಪುರ, ಆಲೂರು, ಹಾಸನ ಅರಕಲಗೂಡು, ಬೇಲೂರು, ಹೊಳೆ ನರಸೀಪುರಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗುಡ್ಡದ ಮಣ್ಣು ಕುಸಿಯದಂತೆ ಮರಳಿನ ಚೀಲವನ್ನು ಇರಿಸಲಾಗಿದೆ. ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಕ್ಷಣಕ್ಷಣಕ್ಕೂ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ನದಿಯ ಪಾತ್ರದ ಭತ್ತದ ಗದ್ದೆಗಳು ಜಲಾವೃತವಾಗಿವೆ. ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳು
ಸಕಲೇಶಪುರ - 08173-243012, ಆಲೂರು - 08170-218222, ಅರಕಲಗೂಡು- 08175-232271, ಅರಸೀಕೆರೆ- 08174-232271, ಬೇಲೂರು-08177-230800, ಚೆನ್ನರಾಯಪಟ್ಟಣ- 08176-352666, ಹಾಸನ- 08172- 260395, ಹೊಳೆನರಸೀಪುರ- 08175-273261 ಈ ಸಂಖ್ಯೆಗೆ ಪರ್ಕಿಸಬಹುದು.
ಆಗಸ್ಟ್ 1ರಿಂದ 7ರವರೆಗೆ ಸರಾಸರಿ ಮಳೆ 118 ಮೀ.ಮೀ. ಆಗಬೇಕಿತ್ತು. ಆದರೆ, 199 ಮಿಲಿ ಮೀಟರ್ ಮಳೆಯಾಗಿದೆ.