ಹಾಸನ : ರಾಜ್ಯದಲ್ಲಿ ತುರ್ತುಪರಿಸ್ಥಿತಿಯ ವಾತಾವರಣವಿದೆ. ಪ್ರತಿಭಟನೆ, ಹೋರಾಟ ಮಾಡಿದವರನ್ನು ಹತ್ತಿಕ್ಕಲಾಗುತ್ತಿದೆ. ಓಟು ಹಾಕಲಿಲ್ಲ ಎಂಬ ಕಾರಣಕ್ಕೆ ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರದ ಹಣವನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಹೆಚ್.ಡಿ. ರೇವಣ್ಣ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ, ಪರಿಹಾರದ ಹಣವನ್ನು ಹಿಂಪಡೆಯುವಂತ ಕೆಟ್ಟ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆಯೆಂದರೆ ಸರ್ಕಾರದ ಖಜಾನೆ ಖಾಲಿಯಾಗಿರಬೇಕು. ಸರ್ಕಾರ ಪರಿಹಾರ ನೀಡದ ಪಕ್ಷದಲ್ಲಿ ಜಿಲ್ಲೆಯ ಜನರಿಂದ ಹಣ ಸಂಗ್ರಹಿಸಿ ಆ ಕುಟುಂಬಗಳಿಗೆ ನೀಡುತ್ತೇವೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಈಗಾಗಲೇ ಎರಡು ಕುಟುಂಬಗಳಿಗೆ ತಲಾ 5 ಲಕ್ಷ ರೂ ನೀಡಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳ ಸರ್ಕಾರ ಕೂಡ ಪರಿಹಾರ ನೀಡಲು ಮುಂದಾಗಿದೆ ಎಂದರು.
ಪ್ರತಿಭಟನೆಯಲ್ಲಿ ಭಾಗಿಯಾದ ವ್ಯಕ್ತಿಗಳಿಂದ ಪ್ರತಿಭಟನೆ ವೇಳೆ ಏನೇ ಹಾನಿಗೊಳಗಾದರೂ ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡುವುದಾಗಿ ಹೇಳಿರುವ ಬಿಜೆಪಿ ಪಕ್ಷದವರು, ಸಿಪಿಐ ಕಾರ್ಯಾಲಯದ ಮೇಲೆ ದಾಳಿಯಾದ ನಷ್ಟದ ಪರಿಹಾರವನ್ನು ವಸೂಲಿ ಮಾಡಲಿ ಎಂದು ಸವಾಲು ಹಾಕಿದರು. ಮಂಗಳೂರು ಗಲಭೆ ಖಂಡಿಸಿ ಹಾಸನದಲ್ಲಿ ಎಲ್ಲಾ ಶಾಸಕರು ಸೇರಿಸಿಕೊಂಡು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು, 2018 -19 ನೇ ಸಾಲಿನಲ್ಲಿ ಜಿಲ್ಲೆಗೆ ಸುಮಾರು 438 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ರಿಂಗ್ ರಸ್ತೆ, ಫ್ಲೈಓವರ್ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರು ಕಳೆದ ಅರವತ್ತು ವರ್ಷಗಳಿಂದ ಹಾಸನ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ನಾನು ಸಚಿವನಾಗಲು ಸಹಕರಿಸಿದ ನಿಮಗೆಲ್ಲ ನಮ್ಮ ಪಕ್ಷ ಋಣಿಯಾಗಿದೆ ಎಂದು ಮಾಜಿ ಸಚಿವ ಇದೇ ವೇಳೆ ರೇವಣ್ಣ ಹೇಳಿದ್ರು.