ಹಾಸನ: ಪ್ರಜ್ವಲ್ ರೇವಣ್ಣರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ತೀರ್ಪಿನ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, "ಮೊಮ್ಮಗ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಹಾಸನದ ಮಾವಿನಕೆರೆ ಬೆಟ್ಟದಲ್ಲಿ ಶನಿವಾರ ಈ ಕುರಿತು ಅವರು ಮಾತನಾಡಿದರು. "ಮುಚ್ಚಿಡಲು ಇಲ್ಲಿ ಏನೂ ಇಲ್ಲ. ಕೆಳ ನ್ಯಾಯಾಲಯಗಳಲ್ಲಿ ನ್ಯಾಯ ಸಿಗದಿದ್ದರೆ ಜನರು ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅಂತೆಯೇ ಪ್ರಜ್ವಲ್ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಪ್ರಕರಣದ ವಿಷಯಗಳನ್ನು ಇನ್ನೂ ಅಧ್ಯಯನ ಮಾಡದೇ ಇರುವ ಕಾರಣ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ತೀರ್ಪಿನ ಸಂಪೂರ್ಣ ಅರಿವು ಪಡೆದು ಮಾತನಾಡುವೆ" ಎಂದರು.
ಕಾವೇರಿ ನೀರು ಬಿಡುಗಡೆ ವಿಚಾರ: "ಡಿ.ಕೆ.ಶಿವಕುಮಾರ್ ಕಾವೇರಿ ವಿಚಾರವಾಗಿ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕಾಗಿ ಇಂದು ಪಕ್ಷಾತೀತವಾಗಿ ಹೋರಾಟ ನಡೆಸುವುದು ಅಗತ್ಯ. ನೆರೆ ರಾಜ್ಯಗಳಂತೆ ಸೂಕ್ಷ್ಮ ವಿಷಯಗಳ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರುವುದಿಲ್ಲ. ಕಾಂಗ್ರೆಸ್ಗೆ ಬೆಂಬಲ ನೀಡಲು ಜೆಡಿಎಸ್ ಸಿದ್ಧವಿದೆ. ರಾಜ್ಯದ ಹಿತದೃಷ್ಟಿಯಿಂದ ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಒಗ್ಗಟ್ಟಿನಿಂದ ಹೋರಾಡಬೇಕು. ನನ್ನ ಅನಾರೋಗ್ಯದ ಕಾರಣ ಕಾವೇರಿ ವಿಚಾರವಾಗಿ ಚರ್ಚಿಸಲು ಸಿಎಂ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: 'ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ': ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ ಅನರ್ಹತೆಗೆ ಕಾರಣವೇನು?: ಹೆಚ್.ಡಿ.ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ ಗಂಭೀರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದ ಆಸ್ತಿ ವಿವರ ಘೋಷಿಸಿರಲಿಲ್ಲ ಎಂದು ಆಗಿನ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಎ.ಮಂಜು ಹಾಗೂ ಉಳಿದವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹತ್ವದ ತೀರ್ಪು ನೀಡಿದೆ.
ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ: ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಬಳಿಕ ತನ್ನ ನಿವಾಸದ ಬಳಿ ಹೇಳಿಕೆ ನೀಡಿದ್ದರು. "ನಾನು ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ಇದು ದೇವರ ಪರೀಕ್ಷೆ ಅಷ್ಟೇ. ಕೋರ್ಟ್ನ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಹಾಗಾಗಿ ಮುಂದೇನು ಮಾಡಬೇಕು ಎಂದು ನನ್ನ ತಂದೆ ಹಾಗೂ ದೇವೇಗೌಡರ ಜೊತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶದ ಪ್ರಮುಖ ಅಂಶಗಳು..