ಹಾಸನ: ಅಂಗಡಿಗಳ ಪರವಾನಿಗೆ ಪಡೆಯಲು ದುಬಾರಿ ಹಣ ಪಾವತಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದವರ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಬ್ಬಾಳಿಕೆ ಮಾಡಲು ಮುಂದಾಗಿದ್ದ ಎನ್ನಲಾಗ್ತಿದೆ. ನಂತರ ಗ್ರಾಮಸ್ಥರೆಲ್ಲಾ ಸೇರಿ ಅಧ್ಯಕ್ಷನಿಗೆ ಗೂಸಾ ಕೊಟ್ಟಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಗ್ರಾಮಸ್ಥರಿಂದ ಗೂಸಾ:
ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿಯಿಂದ ಬೇಕಾಬಿಟ್ಟಿಯಾಗಿ ದರ ನಿಗದಿ ಮಾಡಿದ್ದು, ಅದನ್ನ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಪ್ರಶ್ನಿಸಿದ್ದಾರೆ. ಅದಕ್ಕೆ ಸರಿಯಾದ ಉತ್ತರ ನೀಡದೇ ಏಕಾಏಕಿ ವ್ಯಾಪಾರಸ್ಥರ ಮೇಲೆ ಹಲ್ಲೆಗೆ ಮುಂದಾದ ವೇಳೆ, ಸಿಟ್ಟಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಥಳಿಸಿದ್ದಾರೆ.
ಪ್ರಕರಣ ಹಿನ್ನೆಲೆ:
ಕೆಂಬಾಳು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಾರಸ್ಥರ ಸಭೆ ಕರೆಯಲಾಗಿತ್ತು. ಪ್ರತಿವರ್ಷ ಅಂಗಡಿಯನ್ನ ನವೀಕರಣ ಮಾಡುವುದಕ್ಕೆ ವರ್ಷಕ್ಕೆ 500-600 ರೂ. ಪಡೆಯುತ್ತಿದ್ದ ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ ವ್ಯಾಪಾರ-ವಹಿವಾಟು ನಡೆಸಲು ಪರವಾನಿಗೆ ಪಡೆಯಲು ಏಕಾಏಕಿ ದುಬಾರಿ ಹಣ ಪಾವತಿ ಮಾಡಬೇಕೆಂದು ನೋಟಿಸ್ ನೀಡಲಾಗಿತ್ತು.
ಮದ್ಯದಂಗಡಿಗೆ 25 ಸಾವಿರ ರೂ., ಕೋಳಿಯಂಗಡಿಗೆ 20 ಸಾವಿರ ರೂ, ಹಾರ್ಡವೇರ್ 10 ಸಾವಿರ, ವೆಲ್ಡಿಂಡ್ ಶಾಪ್ 5 ಸಾವಿರ ರೂ, ಚಿಲ್ಲರೆ ಅಂಗಡಿ, ತರಕಾರಿ ಅಂಗಡಿಗಳು ಸೇರಿದಂತೆ ವಿವಿಧ ಬಗೆಯ ವ್ಯಾಪಾರದ ಮಳಿಗೆ, ಅಂಗಡಿಗಳಿಗೆ 2 ಸಾವಿರದ 500 ರಿಂದ ದಿಂದ 3ಸಾವಿರದಷ್ಟು ದುಪ್ಪಟ್ಟು ಹಣ ನೀಡಿ ಎಂದು ಏಕಾಏಕಿ ನೋಟಿಸ್ ನೀಡಲಾಗಿತ್ತು. ಇದರಿಂದ ವ್ಯಾಪಾರಸ್ಥರು ಆಕ್ರೋಶಗೊಂಡಿದ್ದರು.
ಈ ಪ್ರಕರಣ ಸಂಬಂಧ ಪಿಡಿಓ ಕೃಷ್ಣೇಗೌಡ, ಕಾರ್ಯದರ್ಶಿ ರಾಮಚಂದ್ರ ಅವರು ವರದಿಯನ್ನ ತಾಲೂಕು ಕಾರ್ಯಪಾಲಕ ಅಭಿಯಂತರರಿಗೆ, ಶಾಸಕರ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಬೇಕೆಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಶಾಸಕರು ದೂರವಾಣಿಯಲ್ಲಿ ಘಟನೆ ವಿವರವನ್ನ ಪಡೆದಿದ್ದು, ವಿಶೇಷ ಸಭೆ ಕರೆದಿದ್ದಾರೆ.