ಹಾಸನ: ಹಾಸನ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು 14 ವರ್ಷಗಳ ಹಿಂದೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರಿಗೆ ಗುತ್ತಿಗೆ ನೀಡಿದ್ದು, ಕಳೆದ ಐದು ವರ್ಷಗಳಿಂದ ನವೀಕರಣದ ಹೆಸರಿನಲ್ಲಿ ಸ್ಥಗಿತಗೊಂಡಿತ್ತು.
ಈಗ ಸಕ್ಕರೆ ಕಾರ್ಖಾನೆ ಪುನರ್ ಆರಂಭವಾಗಿರುವುದು ಹಾಸನ, ಮಂಡ್ಯ ಮತ್ತು ಇತರ ಭಾಗಗಳಿಗೆ ವರದಾನವಾಗಿದೆ. ಇಂದು ಬೆಳಗ್ಗೆ ಶಾಸಕ ಸಿ.ಎನ್ ಬಾಲಕೃಷ್ಣ ಕಾರ್ಖಾನೆ ಪುನಾರಂಭಕ್ಕೆ ಚಾಲನೆ ನೀಡಿದ್ರು.
ಈ ಹಿಂದೆ 1,200 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದ ಕಾರ್ಖಾನೆ ಈಗ 3,500 ಟನ್ ಅರೆಯುವ ಸಾಮರ್ಥ್ಯ ಹೊಂದಿದೆ. ಅಂದರೆ, ಪ್ರತಿ ವರ್ಷ 8ಲಕ್ಷ ಟನ್ ರೈತರ ಕಬ್ಬು ಅರೆಯುವ ಮೂಲಕ ರೈತರ ಬಾಳಿಗೆ ಆಶಾಕಿರಣವಾಗಿದೆ. ಈ ಹಿಂದೆ ಕಾರ್ಖಾನೆ ಸ್ಥಗಿತಗೊಂಡು, ಇದೀಗ ಪುನರ್ ನವೀಕರಣವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಪುನರ್ ನವೀಕರಣಕ್ಕೆ ಸಹಕಾರ ನೀಡಿದ ಶಾಸಕ ಸಿ.ಎನ್ ಬಾಲಕೃಷ್ಣ ಮತ್ತು ಸರಕಾರಕ್ಕೆ ಧನ್ಯವಾದ ಹೇಳುತ್ತೇವೆ. ಹಿಂದೆ ಇದ್ದ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಂಡು ಈಗ ಆಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯ ಕಾರ್ಯ ಪ್ರಾರಂಭವಾಗಿದೆ. ಐದು ವರ್ಷಗಳ ಹಿಂದೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾಗಿ ಇನ್ನೊಬ್ಬ ಭ್ರಷ್ಟ ಸಿಎಂ ಬರಲಿದ್ದಾರೆ: ಸಿದ್ದರಾಮಯ್ಯ
ಪ್ರತಿ ವರ್ಷ 1,500 ಟನ್ ಕಬ್ಬು ಬೆಳೆಯುತ್ತೇವೆ. ಬೆಳೆದ ಕಬ್ಬನ್ನು ಬೇರೆ ಜಿಲ್ಲೆಗೆ ಕಳುಹಿಸಬೇಕಾದರೆ ನಮಗೆ ಹೆಚ್ಚು ಹೊರೆ ಆಗುತ್ತಿತ್ತು. ಎರಡು ವರ್ಷ ಕಬ್ಬು ಬೆಳೆಯುವುದನ್ನು ಸ್ಥಗಿತಗೊಳಿಸಿದ್ದೆವು.
ಕಳೆದ ಬಾರಿ ಕಬ್ಬು ಬೆಳೆದರೂ ಕಾರ್ಖಾನೆ ಆರಂಭಿಸುವಷ್ಟರಲ್ಲಿ ಬಾಯ್ಲರ್ ಸ್ಫೋಟಗೊಂಡು ಮತ್ತೆ ಎಡವಟ್ಟಾಗಿತ್ತು. ನಮಗೂ ನಿರಾಸೆ ಉಂಟಾಗಿತ್ತು. ಆದರೆ, ಈಗ ಮತ್ತೆ ಪ್ರಾರಂಭವಾಗಿರುವುದು ಸಂತಸಕ್ಕೆ ಕಾರಣವಾಗಿದೆ. ಈ ಭಾಗದ ಜೀವನಾಡಿಯೇ ಈ ಕಾರ್ಖಾನೆ. ಹಾಗಾಗಿ ಇಂದು ಪುನರ್ ಆರಂಭವಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.