ಹಾಸನ : ಇತ್ತೀಚಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿ ಚಾಕು ಇರಿತದಂತಹ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರೀಕ್ಷಿಸಲು ಎಸ್‌ಪಿ ಶ್ರೀನಿವಾಸ್‌ಗೌಡ ಏಕಾಏಕಿ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಚನ್ನರಾಯಪಟ್ಟಣ ಟೌನ್ ಠಾಣೆಯ ಪಿಎಸ್ಐ ಕಿರಣ್‌ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಆತ್ಮಹತ್ಯೆಗೆ ಶರಣಾಗಲು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ನಡೆದ ಎರಡು ಕೊಲೆಗಳು, ಕೆಲಸದ ಒತ್ತಡ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ತಮ್ಮ ಸಿಬ್ಬಂದಿ ಕೆಲಸ ನಿರ್ವಹಿಸಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರಿಶೀಲಿಸಲು ನಿನ್ನೆ ಸಂಜೆ ಎಸ್‌ಪಿ ಶ್ರೀನಿವಾಸ್‌ಗೌಡ ಏಕಾಏಕಿ ರಸ್ತೆಗಿಳಿದು ಪಟ್ಟಣ ಸಂಚಾರ ಮಾಡಿದ್ದಾರೆ. ಈ ವೇಳೆ ನಿಯಮ ಮೀರಿ ಮದ್ಯ, ಸಿಗರೇಟ್ ಮಾರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಶ್ರೀನಿವಾಸ್ ಗೌಡ, ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ಕ್ರೈಂ ಹೆಚ್ಚಾಗುತ್ತಿವೆ. ನಾವು ನಮ್ಮ ಸಿಬ್ಬಂದಿಗೆ ಒತ್ತಡ ಹಾಕುವ ಬದಲು ಅವರಿಗೆ ಫೀಲ್ಡ್ಲ್ಲಿ ಇರುವ ಕಷ್ಟ ನೇರವಾಗಿ ವೀಕ್ಷಿಸಲು ಸ್ವಯಂ ಆಗಿ ಬಂದೆ. ಇಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ, ತುಂಬಾ ಜನ ಹೆಲ್ಮೆಟ್ ಹಾಕಲ್ಲ. ಹೀಗಾಗಿ ಫ್ಯಾಕ್ಟ್ ಚೆಕ್‌ಗಾಗಿ ಫೀಲ್ಡಿಗಿಳಿಯಬೇಕಾಯ್ತು. ಕೆಲವೊಬ್ಬರು ಲೈಸೆನ್ಸ್ ನಿಯಮ ಮೀರಿದ್ದಾರೆ. ಎಲ್ಲೆಂದರಲ್ಲಿ ಸಿಗರೇಟ್ ಸೇದಿ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆಯೂ ಕಾನೂನು ಕ್ರಮ ಜರುಗಿಸಿದ್ದೇವೆ. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಲು ನಮ್ಮ ಸಿಬ್ಬಂದಿಗೆ ಸೂಚಿಸಿದ್ದು, ಅವರ ಜೊತೆ ನಾವು ಇರಲಿದ್ದೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.