ಹಾಸನ: ರಾಷ್ಟ್ರೀಯ ಹೆದ್ದಾರಿ 75 ರ ಹಾಸನ - ಸಕಲೇಶಪುರ ರಸ್ತೆ ಮರು ಡಾಂಬರಿಕರಣ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕಳೆದ ಮೂರು ದಿನದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಇಂದು ಕೂಡಾ ಪ್ರತಿಭಟನೆಯನ್ನ ಮುಂದುವರೆಸಿರುವ ಪ್ರತಿಭಟನಾನಿರತ ಜನರು, ಗುಂಡಿ ಬಿದ್ದ ರಸ್ತೆಗೆ ಹಾಲುತುಪ್ಪ ಬಿಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ರು. ರಾಷ್ಟ್ರೀಯ ಹೆದ್ದಾರಿ ಸಾವಿನ ರಹದಾರಿಯಾಗಿದೆ. ಮೂರು ವರ್ಷಗಳಿಂದ ರಸ್ತೆಯಲ್ಲಿ ಸಾವು ನೋವುಗಳ ಸಂಭವಿಸಿದ್ದು ಅವರ ಗೋಳುಗಳನ್ನ ಜನಪ್ರತಿನಿಧಿಗಳು ಕೇಳದಂತಾಗಿದ್ದಾರೆ. 3 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನ ಮರು ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ಅ. 23 ರಿಂದ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಥಳಕ್ಕೆ ಆಗಮಿಸಿಬೇಕೆಂದು ಪಟ್ಟುಹಿಡಿದ್ರು.
ಪ್ರತಿಭಟನೆಯ ನೇತೃತ್ವವನ್ನ ಯಡೇಹಳ್ಳಿ ಮಂಜುನಾಥ್ ವಹಿಸಿಕೊಂಡಿದ್ದು, ಇವರೊಂದಿಗೆ ಕರವೇ ಸಂಘಟನೆ, ರೈತ ಪರ ಸಂಘಟನೆಗಳು ಸಾಥ್ ನೀಡಿವೆ. ಇನ್ನು ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಿಂದ ಇಂದು ಕೂಡಾ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಅಸ್ತವ್ಯವಸ್ತವಾಗಿತ್ತು. ಕಿಲೋ ಮೀಟರ್ ಗಟ್ಟಲೇ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದರಿಂದ ದೂರದ ಪ್ರಯಾಣಿಕರು ಒಂದುಕಡೆ ಪ್ರತಿಭಟನೆ ಮಾಡುವವರಿಗೆ ಅಷ್ಟೆಯಲ್ಲದೇ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿ ವರ್ಗ ಮತ್ತು ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಡಿಸೆಂಬರ್ ಅಂತ್ಯದಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಗಾರರು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.