ಹಾಸನ : ಕಳೆದ 3 ತಿಂಗಳ ಹಿಂದೆ ಆನೆ ತುಳಿತದಿಂದ ಸಾವಿಗೀಡಾಗಿದ್ದ ಸಕಲೇಶಪುರ ತಾಲೂಕಿನ ಆಸ್ತಿಕ್ ಭಟ್ ಮನೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಕಲೇಶಪುರ ತಾಲೂಕಿನ ಕೊಲ್ಲಳ್ಳಿ, ಗ್ರಾಮದ ಆಸ್ತಿಕ್ ಭಟ್ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮೃತರ ಭಾವಚಿತ್ರಕ್ಕೆ ಹಾರ ಹಾಕಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರಾಣಿ ಮತ್ತು ಮಾನವ ಸಂಘರ್ಷದಿಂದ ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದ ಆಸ್ತಿಕ್ ಭಟ್ ಎಂಬುವರು ಸಾವನ್ನಪ್ಪಿದ್ದಾರೆ.
ಆನೆಗಳ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗುತ್ತದೆ. ಮೃತರ ಕುಟುಂಬಕ್ಕೆ ಈಗಾಗಲೇ 7.5 ಲಕ್ಷ ಹಣವನ್ನು ಪಾವತಿ ಮಾಡಲಾಗಿದೆ. ಈ ರೀತಿಯ ದೊಡ್ಡ ಮೊತ್ತದ ಪರಿಹಾರದ ಹಣವನ್ನು ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ನೀಡಲಾಗುತ್ತಿದೆ.
ಕುಟುಂಬದ ಆಧಾರ ಸ್ತಂಭವಾಗಿದ್ದ, ಆಸ್ತಿಕ್ ಭಟ್ ಸಾವಿಗೀಡಾದ ಹಿನ್ನೆಲೆ ಅವರ ಕುಟುಂಬಕ್ಕೆ ಮಾನವೀಯತೆಯ ದೃಷ್ಟಿಯಿಂದ ಕೆಲಸ ಕೊಡಿಸುವ ಕಾರ್ಯವನ್ನು ಮುಂದೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮನೆಗೆ ಬಂದು ನಮಗೆ ಭರವಸೆ ನೀಡಿದ್ದಾರೆ. ನನ್ನ ಪತಿ ಸಾವಿನಿಂದ ಮನೆಯಲ್ಲಿ ಈಗ ಯಾರು ಇಲ್ಲ. ಪರಿಹಾರದ ಹಣವನ್ನು ಸದ್ಯ ಮಗಳ ಮದುವೆಗೆ ಖರ್ಚು ಮಾಡಲಾಗಿದೆ. ಹಾಗಾಗಿ, ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ ಎಂದು ಮನವಿ ಮಾಡಿದ್ದೇವೆ.
ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರು ಸ್ಪಂದಿಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದು, ನಮಗೆ ಸಮಾಧಾನ ತಂದಿದೆ ಎಂದು ಮೃತ ಆಸ್ತಿಕ್ ಭಟ್ ಪತ್ನಿ ಜಯಲಕ್ಷ್ಮಿ ಹೇಳಿದರು. ನಾನು ಅಂಗವಿಕಲೆ.
ನನ್ನನ್ನು ಇದುವರೆಗೆ ನನ್ನ ಸಹೋದರ ಸಾಕಿಕೊಂಡು ಬಂದಿದ್ದ. ಆದರೆ, ಆಕಸ್ಮಿಕವಾಗಿ ಆನೆ ತುಳಿತದಿಂದ ಸಾವಿಗೀಡಾದ ಹಿನ್ನೆಲೆ ಈಗ ಯಜಮಾನ ಇಲ್ಲದ ಮನೆ ಬಿಕೋ ಎನ್ನುತ್ತಿದೆ.
ದಯಮಾಡಿ ನಮ್ಮ ಮನೆಗೆ ಮೂಲ ಸೌಕರ್ಯದ ಜೊತೆಗೆ ಕೆಲಸ ಕೊಡಿಸಬೇಕೆಂದು ಆಸ್ತಿಕ್ ಭಟ್ ಸಹೋದರಿ ಗಿರಿಜಮ್ಮ ಮನವಿ ಮಾಡಿದರು. ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಕಳೆದ 15-20 ವರ್ಷಗಳಿಂದ ನಿರಂತರವಾಗಿದೆ.
ಕೇವಲ ಎರಡು ತಿಂಗಳಲ್ಲಿ 6 ಮಂದಿ ಬಲಿಯಾಗಿದ್ದಾರೆ. ಸದ್ಯ ಮೃತ ಆಸ್ತಿಕ್ ಭಟ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿರುವ ಅರಣ್ಯ ಸಚಿವರು, ಕಾಡಾನೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕಿದೆ.