ಹಾಸನ : ನಾಲ್ಕನೇ ತರಗತಿಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕೊಂದು ಮೃತದೇಹವನ್ನು ಕೆರೆಯಲ್ಲಿ ಬಿಸಾಡಿದ್ದ ಆರೋಪಿಯನ್ನು ಚನ್ನರಾಯಪಟ್ಟಣದ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಮಡಬ ಕೊಪ್ಪಲು ಗ್ರಾಮದ ಸುರೇಶ್ (21) ಬಂಧಿತ ಆರೋಪಿ.
ಗ್ರಾಮದ ಕೆರೆಯಲ್ಲಿ ಡಿ. 16 ರಂದು ಬಾಲಕಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಮೃತಳ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ವಿವರ:
ರಾತ್ರಿ ವೇಳೆ ಗ್ರಾಮದ ಜಾತ್ರಾ ಉತ್ಸವ ನೋಡುತ್ತಾ ನಿಂತಿದ್ದ ಬಾಲಕಿಯನ್ನು ಪುಸಲಾಯಿಸಿರುವ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಗ್ರಾಮದ ಕೆರೆಯಲ್ಲಿ ಶವವನ್ನು ಎಸೆದಿದ್ದ. ನಂತರ ಕೆರೆಯಿಂದ ಅರ್ಧ ಕಿ.ಮೀ ದೂರದಲ್ಲಿ ಬಟ್ಟೆಗಳನ್ನು ಬಿಸಾಡಿ ತಲೆಮರೆಸಿಕೊಂಡಿದ್ದ. ಮಗಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಗ್ರಾಮದ ಕರೆಯಲ್ಲಿ ಯುವತಿಯ ಶವವಿರುವ ಬಗ್ಗೆ ಬಾಲಕಿ ತಾಯಿಗೆ ಮಾಹಿತಿ ಗೊತ್ತಾಗಿದೆ. ಈ ವೇಳೆ ಸ್ಥಳಕ್ಕೆ ಬಂದಿದ್ದ ತಾಯಿ ಮಗಳ ಸ್ಥಿತಿ ಕಂಡು ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.