ಹಾಸನ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಪರಿಹಾರ ಘೋಷಣೆ ಮಾಡಿ ಪ್ರತಿ ಜಿಲ್ಲೆಯ ವಕೀಲರ ಸಂಘಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ವಕೀಲರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೊರೊನಾದಿಂದಾಗಿ ಸುಮಾರು 4 ತಿಂಗಳಿನಿಂದ ನ್ಯಾಯಾಲಯದ ಕಾರ್ಯ ಕಲಾಪಗಳು ನಡೆಯದೆ ಅನೇಕ ಹಿರಿಯ ಮತ್ತು ಕಿರಿಯ ವಕೀಲರುಗಳು ಸಂಕಷ್ಟವನ್ನು ಅನುಭವಿಸುತ್ತಿರುತ್ತಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್ ತಿಳಿಸಿದ್ದಾರೆ.
ವಕೀಲರು ಪ್ರತಿದಿನ ದುಡಿದು ಬಂದ ಆದಾಯದಿಂದ ಜೀವನ ನಿರ್ವಹಣೆ ನಡೆಸಬೇಕು. ನ್ಯಾಯಾಲಯದ ಕಾರ್ಯ ಕಲಾಪಗಳು ನಡೆಯದೆ ಇರುವುದರಿಂದ ಪ್ರತಿದಿನ ಕುಟುಂಬದ ನಿರ್ವಹಣೆಯನ್ನು ನಡೆಸುವುದು ಕಷ್ಟಕರವಾಗಿರುವುದರಿಂದ ರಾಜ್ಯ ಸರ್ಕಾರವು ವಕೀಲರಿಗೆ ಆರ್ಥಿಕ ಪರಿಹಾರವನ್ನು ನೀಡಬೇಕಾಗಿದೆ ಎಂದರು.
ತೆಲಂಗಾಣ ಮತ್ತು ಇತರೆ ರಾಜ್ಯಗಳಲ್ಲಿ ವಕೀಲರಿಗೆ ರಾಜ್ಯ ಸರ್ಕಾರದಿಂದ ಕೋಟಿಗೂ ಹೆಚ್ಚು ಆರ್ಥಿಕ ಪರಿಹಾರವನ್ನು ಘೋಷಣೆ ಮಾಡಿರುತ್ತಾರೆ. ಚಿಕ್ಕ ರಾಜ್ಯಗಳಲ್ಲಿ 25 ಕೋಟಿ ಪರಿಹಾರವನ್ನು ನೀಡಿದ್ದು, ನಮ್ಮ ಕರ್ನಾಟಕ ರಾಜ್ಯವು ಅತೀ ಹೆಚ್ಚು ವಕೀಲರನ್ನು ಒಳಗೊಂಡಂತಹ ದೊಡ್ಡ ರಾಜ್ಯವಾಗಿದ್ದು, 50 ಕೋಟಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸಂಕಷಕ್ಕೆ ಸಿಲುಕಿರುವ ವಕೀಲರಿಗೆ ಪರಿಹಾರವನ್ನು ಘೋಷಣೆ ಮಾಡಿ, ಪ್ರತಿ ಜಿಲ್ಲೆಯ ವಕೀಲರ ಸಂಘಕ್ಕೆ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದರು.